ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ವಿಶೇಷ ಸಭೆ
ಮುಲ್ಕಿ, ಫೆ.4: ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ಪಕ್ಷದ ಕಾರ್ಯಕರ್ತರ ಧ್ಯೇಯವಾಗಬೇಕು. ಜನಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷದ ಧ್ಯೇಯ ಧೋರಣೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮುಲ್ಕಿ ಹೋಟೆಲ್ ಲಲಿತಮಹಲ್ ಸಬಾಭವನದಲ್ಲಿ ಶನಿವಾರ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಸಾಧಕರಿಗೆ ಸನ್ಮಾನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರದ ಕೊರತೆ ಇದೆ. ಬಿಜೆಪಿಗರು ಕಾಂಗ್ರೆಸ್ ಸಾಧನೆಗಳನ್ನು ತಮ್ಮದೆಂದು ಬಿಂಬಿಸುತ್ತಿದ್ದಾರೆ. ಮುಲ್ಕಿ ಹಾಗೂ ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಕೋರ್ ಕಮಿಟಿ ರಚಿಸಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಇದು ಪೂರಕವಾಗಲಿದೆ. ಎಂದ ಅವರು, ಜಿಲ್ಲೆಯ 16 ಬ್ಲಾಕ್‌ಗಳ ಪೈಕಿ ಮುಲ್ಕಿ ಬ್ಲಾಕ್ ಅತ್ಯಂತ ಬಲಿಷ್ಠ ಬ್ಲಾಕ್ ಎಂದು ಗುರುತಿಸಿಕೊಂಡಿದೆ ಎಂದರು.
ಮುಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು ಮಾತನಾಡಿ, ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ಸಮಿತಿ ಸಭೆ ಕರೆಯಲಾಗುವುದು. ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು. ಅಲ್ಲದೆ, ಮುಲ್ಕಿ ಬ್ಲಾಕ್ ಕಚೇರಿ ನಿರ್ಮಾಣ ಶೀಘ್ರ ನೆರವೇರಲಿದೆ. ಜತೆಗೆ ವಲಯ ಹಾಗೂ ಬೂತ್ ಸಮಿತಿ ರಚನೆ ನಡೆಯಲಿದೆ ಎಂದರು.
ಸನ್ಮಾನ:
ಮಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ವಿಜೇತರಾದ ಪ್ರಮೋದ್ ಕುಮಾರ್, ಜೋಯಲ್ ಡಿಸೋಜಾ ಮತ್ತು ಚಂದ್ರಹಾಸ ಸನಿಲ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಜತೆಗೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾಲೆಟ್ ಪಿಂಟೋ, ರಾಜ್ಯ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಇಲಾಖೆಯ ಸದಸ್ಯೆಯಾಗಿ ಆಯ್ಕೆಯಾದ ಶೈಲಾ ಸೀಕ್ವೆರಾ, ಮೂಡಾ ಸದಸ್ಯರಾಗಿ ಆಯ್ಕೆಯಾದ ವಸಂತ್ ಬೆರ್ನಾರ್ಡ್ ಅವರನ್ನು ಗೌರವಿಸಲಾಯಿತು.
ಬ್ಲಾಕ್ ಪ್ರಧಾನ ಕಾರ್ಯದರ್ಶಿ ಆಯ್ಕೆ:
ಇದೇ ವೇಳೆ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮುಲ್ಕಿ ನಪಂ ಮಾಜಿ ಅಧ್ಯಕ್ಷ ಬಿ.ಎಮ್. ಆಸೀಫ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರೋಜಿನಿ ಸುವರ್ಣ, ಪಕ್ಷದ ಮುಖಂಡರಾದ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಭೀಮಾಶಂಕರ್, ಎಚ್. ಭುಜಂಗ ಶೆಟ್ಟಿ, ಪ್ರಶಾಂತ್ ಅಮೀನ್ ಮೂರ್ನಾಡು, ಹಕೀಂ ಮುಲ್ಕಿ, ರಾಜು ಕುಂದರ್, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜಾ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಮುಖ್ಯ ಅತಿಥಿಗಳಾಗಿದ್ದರು.