×
Ad

ಫೆ.10-12: ‘ಕೊಂಕಣಿ ಲೋಕೋತ್ಸವ’

Update: 2017-02-04 23:16 IST

ಮಂಗಳೂರು,ಫೆ. 4: ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಮಾತೃ ಭಾಷೆಯ 41 ಸಮುದಾಯದವರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಉತ್ಸವ ‘ಕೊಂಕಣಿ ಲೋಕೋತ್ಸವ’ ನಗರದ ಪುರಭವನದಲ್ಲಿ ಫೆ.10ರಿಂದ 12ರವರೆಗೆ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ತಿಳಿಸಿದ್ದಾರೆ.

ಶನಿವಾರ ಬಿಷಪ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕಾಗಿ 12 ತಂಡಗಳನ್ನು ರಚಿಸಲಾಗಿದ್ದು,ಒಟ್ಟು 144 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಸಂಗೀತಗಾರರಾದ ಎರಿಕ್ ಒಝಾರಿಯೊ ಮತ್ತು ವಾಸಂತಿ ಆರ್. ನಾಯಕ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಸಮಿತಿಯ ಅಭ್ಯಾಸ ನಡೆಯುತ್ತಿದೆ ಎಂದರು.

 ಫೆ.10ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಲೋಕೋತ್ಸವ ಉದ್ಘಾಟಿಸಲಿದ್ದಾರೆ. ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.11ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ನಗರದ ಬಲ್ಮಠ ಮಿಷನ್ ಕಂಪೌಂಡ್‌ನಿಂದ ಪುರಭವನವರೆಗೆ ಕೊಂಕಣಿ ಜಾನಪದ, ಸಾಂಸ್ಕೃತಿಕ ಹಿರಿಮೆಯನ್ನೊಳಗೊಂಡ ಭವ್ಯ ಮೆರವಣಿಗೆ ನಡೆಯಲಿದೆ. 30ಕ್ಕೂ ಹೆಚ್ಚು ಕಲಾತಂಡಗಳು, 6 ಟ್ಯಾಬ್ಲೊ, 2 ಸಾವಿರಕ್ಕೂ ಹೆಚ್ಚು ಯುವಜನರು ಭಾಗವಹಿಸಲಿದ್ದಾರೆ. ಮೆರವಣಿಗೆಯನ್ನು ಚಿತ್ರನಟಿ ಎಸ್ತೆರ್ ನೊರೊನ್ಹ ಉದ್ಘಾಟಿಸಲಿದ್ದಾರೆ. ಅಂದು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆ, ಯುವ ಸಾಹಿತ್ಯದ ಕುರಿತು ಸಂವಾದ, ವಿಚಾರ ಸಂಕಿರಣಗಳು ನಡೆಯಲಿವೆ ಎಂದು ಕ್ಯಾಸ್ತಲಿನೋ ವಿವರಿಸಿದರು.

ಫೆ.12ರಂದು ಲೋಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ ಪ್ರದಾನ ಮಾಡಲಾಗುವುದು. ಈ ದಿನವನ್ನು ಸಮಸ್ತ ಕೊಂಕಣಿಗರ ಸಾಹಿತ್ಯ, ಸಾಂಸ್ಕೃತಿಕ ಪ್ರದರ್ಶನಕ್ಕೆ ಮೀಸಲಿರಿಸಲಾಗಿದ್ದು, ಕೊಂಕಣಿ ಸಂಘ ಸಂಸ್ಥೆಗಳಿಂದ ಕೊಂಕಣಿ ನೃತ್ಯ ಪ್ರದರ್ಶನ ನಡೆಯಲಿದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಆಯ್ದ ಕುಡುಬಿ, ಖಾರ್ವಿ, ಸಿದ್ದಿ, ದಾಲ್ದಿ ಹಾಗೂ ಇತರ ಸಮುದಾಯಗಳ ಜಾನಪದ ಕಲೆಗಳ ಪ್ರದರ್ಶನ, ಕವಿಗೋಷ್ಠಿ, ಕಾವ್ಯ- ಕುಂಚ, ಜಾದೂ ಪ್ರದರ್ಶನ, ನಾಟಕ, ಸಮೂಹ ಗಾಯನ, ಹಾಸ್ಯ ಕಾರ್ಯಕ್ರಮಗಳು ನೆರವೇರಲಿವೆ ಎಂದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೊಂಕಣಿ ಮಾತೃಭಾಷಿಕ 10 ಮಂದಿ ಮಕ್ಕಳು, 10 ಮಂದಿ ಮಹಿಳೆಯರು, 12 ಯುವಕರು, 12 ಮಂದಿ ಸಾರ್ವಜನಿಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಸುಮಾರು 1000 ಕಲಾವಿದರು, 36 ತಂಡಗಳು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಲೋಕೋತ್ಸವ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಎರಿಕ್ ಒಝಾರಿಯೊ, ಆಹಾರ ಕಮಿಟಿಯ ಸಂಚಾಲಕಿ ಗೀತಾ ಕಿಣಿ, ಸಂಗೀತ ವಿದ್ವಾನ್ ವಾಸಂತಿ ಆರ್. ಕಿಣಿ, ಅಕಾಡಮಿ ಸದಸ್ಯ ಲಾರೆನ್ಸ್ ಡಿಸೋಜ, ಪ್ರಚಾರ ಸಮಿತಿಯ ಎಲಿಯಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News