×
Ad

ಫೆ.12ರಿಂದ 18ರವರೆಗೆ ಕೊರಗರ ಶೈಕ್ಷಣಿಕ ಮಾಹಿತಿ ಸಂಗ್ರಹ

Update: 2017-02-04 23:40 IST

ಉಡುಪಿ, ಫೆ.4: ಜಿಲ್ಲೆಯಲ್ಲಿ ಕೊರಗ ಸಮುದಾಯದವರ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಫೆ.12ರಿಂದ 18ರವರೆಗೆ ಕೊರಗ ಸಮು ದಾಯದ ಶೈಕ್ಷಣಿಕ ಸಮೀಕ್ಷೆಯನ್ನು ಶಿಕ್ಷಣ ಇಲಾಖೆಯು ನಡೆಸಲಿದೆ ಎಂದು ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ವಿದ್ಯಾಂಗ ಇಲಾಖೆಯ ಕಚೇರಿಯಲ್ಲಿ ಇಂದು ನಡೆದ ಕೊರಗ ಸಮು ದಾಯದ ಶೈಕ್ಷಣಿಕ ಸ್ಥಿತಿಗತಿ ಅಧ್ಯಯನಕ್ಕೆ ಸಂಬಂಧಿಸಿದ ಮೊದಲನೆ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕೊರಗ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಹಾಗೂ ಕಾರ್ಯ ತಂತ್ರಗಳನ್ನು ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಿಕ್ಷಣ ಸಪ್ತಾಹ ಕಾರ್ಯಕ್ರಮದಡಿ ಸಮಗ್ರ ಸಮೀಕ್ಷೆಯನ್ನು ಹಮ್ಮಿಕೊಂಡಿದೆ ಎಂದವರು ಹೇಳಿದರು.

ಪ್ರತೀ ಹಾಡಿಗೆ ಮೂರು ಜನರ ತಂಡ ತೆರಳಲಿದ್ದು, ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಬಿಇಒ ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಗಳಿರುವರು. ಇವರು ಪ್ರತೀ ಮನೆಗೆ ತೆರಳಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಎಂದರು.

ಸಮಗ್ರ ಗಿರಿಜನ ಅಭಿವೃದ್ಧಿ ಉಪಯೋಜನೆಯವರ ಲಭ್ಯವಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 2,572 ಕೊರಗ ಕುಟುಂಬಗಳಿದ್ದು, ಶೈಕ್ಷಣಿಕ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಶೈಕ್ಷಣಿಕ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್, ಡಯಟ್ ಪ್ರಾಂಶುಪಾಲ ಶೇಖರ್, ಉಪನ್ಯಾಸಕ ಪ್ರಸನ್ನ ಕುಮಾರ್, ಐಟಿಡಿಪಿ ಇಲಾಖೆಯ ಉಮಾಕಾಂತಿ, ಕೊರಗ ಸಮುದಾಯದ ಮುಖಂಡರಾದ ಬೊಗ್ರ ಕೊರಗ, ಕುಮಾರ್‌ದಾಸ್ ಹಾಲಾಡಿ, ಗಣೇಶ ಕೊರಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News