×
Ad

ಕಡ್ಡಾಯ ಶಿಕ್ಷಣ ಮಾತೃಭಾಷೆಯಲ್ಲೇ ಇರಲಿ: ಡಾ.ಜಯಪ್ರಕಾಶ್

Update: 2017-02-04 23:44 IST

 ಬೆಳ್ಮಣ್, ಫೆ.4: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟು ಸೇರಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಮೂರರಿಂದ 16 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮಗುವಿನ ಮಾತೃ ಭಾಷೆಯಲ್ಲೇ ಒದಗಿಸಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಮಾವಿನ ಕುಳಿ ಹೇಳಿದ್ದಾರೆ.

ಬೆಳ್ಮಣ್ ಸಂತ ಜೋಸೆಫ್‌ರ ಶಾಲೆಯಲ್ಲಿ ವಂ. ಫಾ.ನಿಕೋಲಸ್ ಕರ್ನಿರೊ ಸಭಾಂಗಣದ ಕೋಡಿಮಾರು ಗೋಪಾಲಕೃಷ್ಣ ತಂತ್ರಿ ವೇದಿಕೆಯಲ್ಲಿ ಶನಿವಾರ ನಡೆದ ಹದಿಮೂರನೆ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ಕನಿಷ್ಠ ಏಳನೆ ತರಗತಿ ವರೆಗಾದರೂ ಶಾಲೆಯಲ್ಲಿ ಕಲಿಸದಿದ್ದರೆ ಕನ್ನಡ ಭಾಷೆಯನ್ನು ಯಾರು ಬಳಸುತ್ತಾರೆ, ಯಾರು ಬರೆಯುತ್ತಾರೆ? ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬರ ಪರಿಶ್ರಮ ಅಗತ್ಯ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಶಾಸಕ ವಿ.ಸುನಿಲ್‌ಕುಮಾರ್ ಮಾತನಾಡಿ, ಪ್ರತಿ ಯೊಂದು ಭಾಷೆಯ ಹಿಂದೆ ಸಂಸ್ಕೃತಿ ಅಡಗಿರುತ್ತದೆ. ಭಾಷೆಯ ಮೂಲಕ ನಮ್ಮ ನಾಡಿನ ಸಂಸ್ಕೃತಿ ನೆನಪಾಗಬೇಕಾಗಿದೆ ಎಂದರು.

ಡಾ.ಜಯಪ್ರಕಾಶ ಮಾವಿನಕುಳಿಯವರ ವಿಮರ್ಶಾ ಲೇಖನಗಳ ಸಂಗ್ರಹ ‘ಸಮುಚಿತ’ವನ್ನು ಚಿಂತಕಿ ವೀಣಾ ಬನ್ನಂಜೆ ಇದೇ ವೇಳೆ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು.

 ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ದನ ಭಟ್, ಸಮ್ಮೇಳನದ ಗೌರವಾಧ್ಯಕ್ಷ ರೆ.ಫಾ.ಸುನೀಲ್ ಜೋಸೆಫ್ ವೇಗಸ್, ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ತಾಪಂ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಬೆಳ್ಮಣ್ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ರಾವ್, ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ.ಜೋಸ್ವಿನ್ ಪ್ರವೀಣ್ ಡಿಸೋಜ, ಸುಹಾಸ್ ಹೆಗ್ಡೆ, ಮುಖ್ಯ ಶಿಕ್ಷಕಿ ಭಗಿನಿ ಲೂಸಿ ಪಿರೇರ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಕಮಲಿನಿ, ಸಮ್ಮೇಳನ ಕಾರ್ಯದರ್ಶಿ ಬಿ.ಪುಂಡಲೀಕ ಮರಾಠೆ, ನಾರಾಯಣ ಮಡಿ, ಶೇಖರ ಅಜೆಕಾರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸ್ವಾಗತಿಸಿ ದರು. ನಾರಾಯಣ ಶೆಣೈ ವಂದಿಸಿದರು. ಗಣೇಶ ಜಾಲ್ಸೂರು ಹಾಗೂ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರು ಹಾಗೂ ಅತಿಥಿಗಳನ್ನು ಸಂತ ಜೋಸೆಫ್‌ರ ಚರ್ಚ್‌ನಿಂದ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಕಳ ತಹಶೀಲ್ದಾರ್ ಗುರುಪ್ರಸಾದ್ ಟಿ.ಜಿ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಪ್ರಭಾಕರ ಶೆಟ್ಟಿ ಪರಿಷತ್ ಧ್ವಜ ಅರಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News