ಫೆ.10ರೊಳಗೆ ಪಡಿತರ ನೀಡಲು ಕ್ರಮ: ಜಿಲ್ಲಾಧಿಕಾರಿ
ಉಡುಪಿ, ಫೆ.4: ಆಹಾರ ಇಲಾಖೆಯಲ್ಲಿ ಸುಧಾರಣೆ ತರಲು ಎಲ್ಲ ವ್ಯವಹಾರಗಳನ್ನು ಗಣಕೀಕರಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಫೆಬ್ರವರಿ 1ರಿಂದ ಪಡಿತರ ವಿತರಣೆ ಮಾಡುವಲ್ಲಿ ವಿಳಂಬವಾಗಿದೆ. ಆದರೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಫೆ.10ರೊಳಗೆ ಪಡಿತರವನ್ನು ಲಭ್ಯಗೊಳಿಸಿ, ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಫೆಬ್ರವರಿಯಿಂದ ಪಡಿತರ ವಿತರಣೆಯಲ್ಲಿ ಹೆಸರು ಕಾಳನ್ನು ಸಹ ಸೇರಿಸಲಾಗುತ್ತಿದ್ದು, ಅಕ್ಕಿ, ತಾಳೆ ಎಣ್ಣೆ, ಸಕ್ಕರೆ, ಉಪ್ಪು, ಬೇಳೆಕಾಳು ಹಾಗೂ ಸೀಮೆ ಎಣ್ಣೆ ಕೂಡಾ ಪಡೆಯಬಹುದಾಗಿದೆ ಎಂದರು.
ಆಧಾರ್ ಸೀಡಿಂಗ್ ಮಾಡಿಸದಿರುವ ಅರ್ಹ ಫಲಾನುಭವಿಗಳಿಗೆ ಪಡಿತರ ನಿರಾಕರಿಸುವುದು ಸರಿಯಲ್ಲ ಎಂದು ಸರಕಾರ ಹೇಳಿದೆ. ಆದ್ದರಿಂದ ಮತ್ತೊಂದು ಸುತ್ತಿನ ಆಧಾರ್ ಸೀಡಿಂಗ್ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಅರ್ಹ ಫಲಾನುಭ ವಿಗಳು ತಮ್ಮ ಆಧಾರ್ ಸಂಖ್ಯೆಯನ್ನು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ, ಫ್ರಾಂಚೈಸಿಗಳಲ್ಲಿ, ಗ್ರಾಪಂಗಳಲ್ಲಿ, ತಾಲೂಕು ಕಚೇರಿಯಲ್ಲಿ, ಪುರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ಆಧಾರ್‌ಗಳನ್ನು ಲಿಂಕ್ ಮಾಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.