ಚಿನ್ನಾಭರಣ ಕಳವು ಆರೋಪಿಗಳಿಬ್ಬರ ಬಂಧನ, ಸೊತ್ತು ವಶ
ಉಡುಪಿ, ಫೆ.5: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಕೂರು ಮಸ್ಕಿಬೈಲು ಎಂಬಲ್ಲಿ ಬೀಗ ಹಾಕಿದ್ದ ಮನೆಯೊಂದರಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ ಐರೋಡಿ ಗ್ರಾಮದ ಗೋಳಿಬೆಟ್ಟು ನಿವಾಸಿ ಪ್ರಹ್ಲಾದ ಪೂಜಾರಿ ಹಾಗೂ ಸಾಸ್ತಾನ ಗುಂಡ್ಮಿ ಗ್ರಾಮದ ಪ್ರಶಾಂತ ಜಿ. ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕಳವುಗೈದ ಚಿನ್ನಾಭರಣ ಹಾಗೂ ಕಳವಿಗೆ ಬಳಸಿದ ಸುಮಾರು 5.60 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ 19.420 ಗ್ರಾಂನ ಸುಮಾರು 58 ಸಾವಿರ ರೂ. ವೌಲ್ಯದ ಚಿನ್ನಾಭರಣ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರೂ ಹಳೆ ಆರೋಪಿಗಳಾಗಿದ್ದು, ಪ್ರಹ್ಲಾದ ಪೂಜಾರಿ ವಿರುದ್ಧ ತನ್ನ ಮನೆಯಲ್ಲೇ ಕಳ್ಳತನ ಸೇರಿದಂತೆ ಕುಂದಾಪುರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈತನ ಜೊತೆ ಸೇರಿ ಕೋಟೇಶ್ವರದಲ್ಲಿ ಮಹಿಳೆಯೊಬ್ಬರ ಸರ ಕಳ್ಳತನ ನಡೆಸಿದ ಬಗ್ಗೆ ಪ್ರಶಾಂತ ವಿರುದ್ಧ ಪ್ರಕರಣ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.