ಮಂಗಳೂರಿನಲ್ಲಿ ವಿಂಡೀಸ್‌ನ ಸ್ಟಾರ್ ಕ್ರಿಕೆಟರ್ ಕ್ರಿಸ್ ಗೇಲ್!
ಮಂಗಳೂರು, ಫೆ.5: ಮಂಗಳೂರಿನ ಜನತೆಗೆ ಇಂದು ಬೆಳಗ್ಗೆ ಅಚ್ಚರಿಯೊಂದು ಕಾದಿತ್ತು. ಅದು ನಗರದ ಬಲ್ಮಠದಲ್ಲಿ ವೆಸ್ಟ್ ಇಂಡಿಸ್‌ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕಾಣಿಸಿಕೊಂಡಿದ್ದರು!
ಹೌದು, ಈ ದೈತ್ಯ ಕ್ರಿಕೆಟರ್ ಬಲ್ಮಠದಲ್ಲಿರುವ ವೈನ್ ಗೇಟ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಆಗಮಿಸಿದ್ದರು. ಅವರನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹಣೆಗೆ ಕುಂಕುಮ ಇಟ್ಟು, ಹೂಹೂರ ಹಾಕಿ ಸ್ವಾಗತಿಸಲಾಯಿತು.
ಈ ವೇಳೆ ಎಳನೀರು ಸವಿದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಲ್, ‘‘ಮಂಗಳೂರು ಫೆಂಟಾಸ್ಟಿಕ್’’ ಎಂದು ಉದ್ಗರಿಸಿದರು.
ಸ್ಫೋಟಕ ಬ್ಯಾಟ್ಸ್‌ಮನ್ ಗೇಲ್ ಆಗಮನದ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ನೂರಾರು ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದರು. ಜನರ ನೂಕುನುಗ್ಗಲಿನ ನಡುವೆಯೇ ಕ್ರಿಸ್ ಗೇಲ್ ರೋಡ್ ಶೋ ನಡೆಸಿದರು. ಈ ವೇಳೆ ಅಭಿಮಾನಿಗಳು ಅವರ ಫೋಟೊ ಕ್ಲಿಕ್ಕಿಸಲು ಮುಗಿಬಿದ್ದರು.
ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರ ರಾಯಭಾರಿಯಾಗಿರುವ ಕ್ರಿಸ್ ಗೇಲ್ ಇದೇ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದ್ದು, ಅವರನ್ನು ಬಲ್ಮಠದ ವೈನ್ ಗೇಟ್ ಮಾಲಕರು ಆತ್ಮೀಯವಾಗಿ ಬರಮಾಡಿಕೊಂಡರು.