ಊರು, ಧರ್ಮ ಮರೆತು ನನ್ನನ್ನು ಸತ್ಕರಿಸಿದರು!
ಬಂಟ್ವಾಳ, ಫೆ 5: ಮಾಡಲು ಕೆಲಸವಿಲ್ಲ. ಪ್ರಾಯೋಜಕರ ಸ್ಪಂದನೆ ಇಲ್ಲ. ತವರಿಗೆ ಮರಳುವ ಅಂದರೆ ಕೈಯಲ್ಲಿ ಹಣವಂತೂ ಇಲ್ಲ. ಅದರ ಜೊತೆಗೆ ಪಾಸ್‌ಪೋರ್ಟ್ ಕೂಡಾ ಇಲ್ಲ. ಬೀದಿಬದಿಯಲ್ಲಿ ಗುಜರಿ ಹೆಕ್ಕಿ ಮಾರಾಟ ಮಾಡಿ ಹೊಟ್ಟೆ ತುಂಬಿಸುತ್ತಾ ಕತ್ತಲೆ ಕೋಣೆಯಲ್ಲಿ ಮೊಂಬತ್ತಿ ಉರಿಸಿ ಸಂಕಷ್ಟ ಸ್ಥಿತಿಯಲ್ಲಿ ದಿನದೂಡುತ್ತಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ವ್ಯಕ್ತಿಯೊಬ್ಬರು ಇಂಡಿಯನ್ ಸೋಷಿಯಲ್ ಫೋರಂ (ಐಎಸ್‌ಎಫ್) ಕತಾರ್ ಘಟಕದ ಪ್ರಯತ್ನದಿಂದ ಇದೀಗ ಮನೆ ಸೇರಿ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕೇಪುಕೋಡಿ ನಿವಾಸಿ ವೀರ ಪೂಜಾರಿ ಎಂಬವರ ಪುತ್ರ ವೆಂಕಪ್ಪ ಪೂಜಾರಿಯವರೇ ಐಎಸ್‌ಎಫ್ ನೆರವಿನಿಂದ ಊರು ಸೇರಿದವರು. ಊರಿನಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ವೆಂಕಪ್ಪ ಪೂಜಾರಿ ಮಂಗಳೂರಿನ ಏಜೆಂಟ್‌ವೊಂದರ ಮೂಲಕ 2016 ಮೇ 4ರಂದು ಕತಾರ್‌ಗೆ ತೆರಳಿದ್ದರು. ಮೊದಲೇ ನಿಗದಿಯಾಗಿದ್ದಂತೆ ಕತಾರ್ ನ ’ಅಲ್ ತಗ್ತೀದ್ ಸ್ಟೋನ್ ಆಂಡ್ ಮಾರ್ಬಲ್ಸ್ ಕಂಪೆನಿ’ಯಲ್ಲಿ ಕೆಲಸ ಸಿಕ್ಕಿತ್ತಾದರೂ ಕೆಲಸಕ್ಕೆ ಸೇರಿ ಎರಡೇ ತಿಂಗಳಾಗುಷ್ಟರಲ್ಲಿ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಕಂಪೆನಿ ಬಂದ್ ಆಗಿತ್ತು. ಈ ಕಂಪೆನಿಯಲ್ಲಿ ಕೆಲಸಕ್ಕಿದ್ದ ಒಟ್ಟು 30 ಮಂದಿಯಲ್ಲಿ 29 ಮಂದಿ ಅವರವರ ಊರಿಗೆ ಮರಳಿದರೆ, ವೆಂಕಪ್ಪ ಪೂಜಾರಿ ಮಾತ್ರ ಊರಿಗೆ ಮರಳಲು ಹಣವಿಲ್ಲದೆ ಅಲ್ಲೇ ಬಾಕಿಯಾದರು.
"ಕಂಪೆನಿಯಲ್ಲಿ ಎರಡು ತಿಂಗಳು ದುಡಿದಿದ್ದೆನಾದರೂ ಒಂದೇ ಒಂದು ರೂಪಾಯಿ ಸಂಬಳ ಸಿಕ್ಕಿಲ್ಲ. ಊರಿಗೆ ಮರಳುವ ಎಂದರೆ ವಿಮಾನದ ಟಿಕೆಟ್‌ಗೆ ಬೇಕಾದಷ್ಟು ಹಣ ನನ್ನಲ್ಲಿರಲಿಲ್ಲ. ಎಲ್ಲಕ್ಕಿಂತಲೂ ದೊಡ್ಡ ಸಮಸ್ಯೆ ಎಂದರೆ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಹೋದಾ ಸುಡಾನ್ ಮೂಲಕ ಕಂಪೆನಿಯ ಮಾಲಕನ ಪತ್ತೆಯೇ ಇರಲಿಲ್ಲ. ಹೀಗಾಗಿ ಯಾವ ದಾರಿಯೂ ಕಾಣದೆ ದಯನೀಯ ಸ್ಥಿತಿಯಲ್ಲಿ ಕೊರಗುತ್ತಾ ಅಲ್ಲಿ ಕಾಲ ಕಳೆಯುವಂತಾಗಿತ್ತು" ಎಂದು ವೆಂಕಪ್ಪ ಪೂಜಾರಿ ತಾನು ಕತಾರ್ ನಲ್ಲಿ ಅನುಭವಿಸಿದ ದಯನೀಯ ಸ್ಥಿತಿಯನ್ನು ಹೇಳುತ್ತಾರೆ.
"ಕಂಪೆನಿ ಬಂದ್ ಆದರೂ ಕಂಪೆನಿಗೆ ಸೇರಿದ ಒಂದು ಕೊಠಡಿ ವಾಸ್ತವ್ಯಕ್ಕೆ ಲಭಿಸಿತ್ತು. ಆದರೆ ಕೊಠಡಿಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದುಡಿಮೆ ಇಲ್ಲದಿದ್ದರಿಂದ ಊಟಕ್ಕೂ ಹಣವಿರಲಿಲ್ಲ. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ ಗುಜರಿ ಅಂಗಡಿಗೆ ಮಾರಾಟ ಮಾಡಿ ಹೊಟ್ಟೆ ತುಂಬಿಸಿ ಕತ್ತಲ ಕೋಣೆಯಲ್ಲಿ ಮೊಂಬತ್ತಿ ಉರಿಸಿ ಸಂಕಷ್ಟದ ಜೀವನ ನಡೆಸುತ್ತಿದೆ'' ಎಂದು ವೆಂಕಪ್ಪ ಪೂಜಾರಿ ತಿಳಿಸಿದ್ದಾರೆ.
''ಊರಿನಲ್ಲಿ ದೊರೆತ ಮಾಹಿತಿಯಂತೆ ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಸದಸ್ಯರು ನನ್ನನ್ನು ಹುಡುಕಿಕೊಂಡು ಬಂದರು. ಅವರು ನನ್ನನ್ನು ಸಂಪರ್ಕಿಸಿದ ಬಳಿಕ ನನಗೆ ಮರುಜನ್ಮ ದೊರೆತಂತಾಯಿತು. ನನ್ನನ್ನು ಅವರು ಅವರಲ್ಲೊಬ್ಬರಂತೆ ಕಂಡು ಆತ್ಮೀಯತೆಯಿಂದ ನನ್ನನ್ನು ಅವರ ರೂಂಗೆ ಕರೆದುಕೊಂಡು ಹೋಗಿ ಸತ್ಕರಿಸಿದರು. ನಾನು ನೀಡಿದ ಮಾಹಿತಿಯನುಸಾರ ನನ್ನ ಪಾಸ್‌ಪೋರ್ಟ್ ತೆಗೆದುಕೊಂಡು ಹೋಗಿದ್ದ ಕಂಪೆನಿಯ ಮಾಲಕನನ್ನು ಹುಡುಕಾಡಿದ ಐಎಸ್‌ಎಫ್ ಸಂಘಟನೆಯ ಸದಸ್ಯರು ಆತನನ್ನು ಪತ್ತೆ ಹಚ್ಚಿ ಆತನಿಂದ ನನ್ನ ಪಾಸ್‌ಪೋರ್ಟ್‌ನ್ನು ಪಡೆದಿದ್ದರು. ಊರಿಗೆ ಮರಳಲು ಕಾನೂನಿನ ತೊಡಕಿತ್ತು. ಅದನ್ನು ಕೂಡಾ ಪರಿಹರಿಸಿದ ಐಎಸ್‌ಎಫ್‌ನವರು ವಿಮಾನದ ಟಿಕೆಟ್ ಮಾಡಿ ಊರಿಗೆ ಕಳುಹಿಸಿ ಕೊಟ್ಟಿದ್ದು ಇಂದು ನಾನು ನನ್ನ ಕುಟುಂಬವನ್ನು ಸೇರಿದ್ದೇನೆ. ಐಎಸ್‌ಎಫ್‌ನ ಈ ಸೇವೆಗೆ ನಾನು ಅಭಾರಿಯಾಗಿದ್ದೇನೆ'' ಎಂದು ಆನಂದಭಾಷ್ಪದೊಂದಿಗೆ ನುಡಿಯುತ್ತಾರೆ ವೆಂಕಪ್ಪ ಪೂಜಾರಿ.
''ನಾನು ಕಲ್ಲಡ್ಕದವನು. ಕಲ್ಲಡ್ಕದ ಒಬ್ಬ ಹಿಂದೂವಾದ ನನಗೆ ಯಾವ ಮುಸ್ಲಿಮನು ತಾನೆ ಸಹಾಯ ಮಾಡಿಯಾನು? ಎಂದು ನಾನು ನನ್ನಲ್ಲೇ ಪ್ರಶ್ನಿಸುತ್ತಿದ್ದೆ. ಆದರೆ ನನ್ನ ಪ್ರಶ್ನೆ ಸುಳ್ಳಾಗಿದೆ. ಸಂಕಷ್ಟದಲ್ಲಿದ್ದ ನನ್ನ ಊರು, ಧರ್ಮವನ್ನು ಮರೆತು ಭಾರತೀಯನೊಬ್ಬ ಸಂಕಷ್ಟನಲ್ಲಿದ್ದಾನೆ ಎಂಬುದನ್ನು ಅರಿತು ಐಎಸ್‌ಎಫ್ ಸದಸ್ಯರು ನನ್ನನ್ನು ಹುಡುಕಿಕೊಂಡು ಬಂದು ನೆರವು ನೀಡಿದ್ದಾರೆ. ಸುಮಾರು ಒಂದೂವರೆ ತಿಂಗಳು ಅವರು ನನ್ನನ್ನು ಸತ್ಕರಿಸಿದ್ದಾರೆ. ಕೆಲವು ಸಮಯ ಇಲ್ಲೇ ಇರು. ನಿನಗಾದ ಅನ್ಯಾಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಪರಿಹಾರ ತೆಗೆದು ಕೊಡುತ್ತೇವೆ ಎಂದು ಐಎಸ್‌ಎಫ್ ಮುಖಂಡರು ನನ್ನಲ್ಲಿ ವಿನಂತಿಸಿದರು.
ಯಾವುದೇ ಪರಿಹಾರ ನನಗೆ ಬೇಡ. ನಾನು ನನ್ನ ಮನೆ ಸೇರಿದರೆ ಸಾಕು ಎಂದು ಅವರಲ್ಲಿ ವಿನಂತಿಸಿದೆ. ಅವರ ಸತತ ಪರಿಶ್ರಮದಿಂದ ನಾನಿಂದು ಮನೆ ಸೇರಿದ್ದೇನೆ. ಐಎಸ್‌ಎಫ್‌ನ ನಾಯಕರಾದ ಇಬ್ರಾಹೀಂ ಬೊಳ್ಳೂರು, ಹಾರುನ್ ಸುರತ್ಕಲ್, ಲತೀಫ್ ಮಡಿಕೇರಿ, ಶರೀಫ್ ವಗ್ಗ, ಯಹ್ಯಾ ಪುತ್ತೂರು ಮತ್ತು ಐಎಸ್‌ಎಫ್ ಬಂಟ್ವಾಳ ತಾಲೂಕು ಪ್ರತಿನಿಧಿ ಅಶ್ರಫ್ ಮಾಚಾರ್ ಸಹಿತ ನನಗಾಗಿ ಪರಿಶ್ರಮಿಸಿದ ಇತರ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.
- ವೆಂಕಪ್ಪ ಪೂಜಾರಿ, ಕಲ್ಲಡ್ಕ ನಿವಾಸಿ