ಹಿಕ್ಮತ್‌ಯಾರ್‌ರನ್ನು ಭಯೋತ್ಪಾದಕರ ಪಟ್ಟಿಯಿಂದ ತೆರವುಗೊಳಿಸಿದ ವಿಶ್ವಸಂಸ್ಥೆ
ಯನೈಟೆಡ್ ನ್ಯಾಶನ್ಸ್,ಫೆ. 5: ಅಫ್ಘಾನಿಸ್ತಾನದ ಸಶಸ್ತ್ರ ಸೇನಾ ವಿಭಾಗವಾದ ಹಿಝ್ಬೆ ಇಸ್ಲಾಮಿ ನಾಯಕ ಗುಲ್ಬುದ್ದೀನ್ ಹಿಕ್ಮತಿಯಾರ್‌ರನ್ನು ಭಯೋತ್ಪಾದಕರ ಪಟ್ಟಿಯಿಂದ ವಿಶ್ವಸಂಸ್ಥೆ ತೆಗೆದು ಹಾಕಿದ್ದು, ಅವರ ಸೊತ್ತುಗಳ ಸ್ಥಂಭನವನ್ನು ಮತ್ತು ಪ್ರಯಾಣ ನಿಷೇಧವನ್ನು, ಆಯುಧಗಳಿಗೆ ದಿಗ್ಬಂಧನ ವಿಧಿಸುವ ಕ್ರಮಗಳನ್ನು ಕೂಡಾ ರದ್ದುಪಡಿಸಿದೆ. ಆದ್ದರಿಂದ ತನ್ನ ಹುಟ್ಟೂರಿಗೆ ಹೋಗಲು ಇದ್ದ ಅಡ್ಡಿ ಅವರಿಗೆ ನಿವಾರಣೆಗೊಂಡಿದೆ.
ಐಸಿಸ್, ಅಲ್‌ಖಾಯಿದ ಭಯೋತ್ಪಾದನಾ ಸಂಘಟನೆಗಳ ಪಟ್ಟಿಯಲ್ಲಿ ಹಿಝ್ಬೆ ಇಸ್ಲಾಮಿಯನ್ನು ಕೂಡಾ ಈಹಿಂದೆ ಸೇರಿಸಲಾಗಿತ್ತು. 2003ರಲ್ಲಿ ಹಿಕ್ಮತ್‌ಯಾರ್‌ರನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿತ್ತು. 1997ರಿಂದ ಅವರು ಭೂಗತ ಜೀವನ ನಡಿಸುತ್ತಿದ್ದಾರೆ. ಹಿಕ್ಮತ್‌ಯಾರ್ ಪಾಕಿಸ್ತಾನದಲ್ಲಿದ್ದಾರೆ ಎನ್ನಲಾಗುತ್ತಿದೆ. ಕಳೆದವರ್ಷ ಹಿಕ್ಮತ್‌ಯಾರ್‌ರೊಂದಿಗೆ ಅಫ್ಘಾನ್ ಸರಕಾರ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಸಶಸ್ತ್ರ ವಿಭಾಗಗಳನ್ನು ರಾಷ್ಟ್ರದ ಮುಖ್ಯವಾಹಿನಿಗೆ ಕರೆತರುವ ಅಂಗವಾಗಿ ಈ ಒಪ್ಪಂದ ನಡೆದಿತ್ತು.
1980ರಲ್ಲಿ ಸೋವಿಯತ್ ರಷ್ಯ ವಿರುದ್ಧ ಹೋರಾಟಕ್ಕೆ ಅವರು ನೇತೃತ್ವವನ್ನು ನೀಡಿದ್ದರು. ಅಫ್ಘಾನ್ ಪ್ರಧಾನಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. 2001ರಲ್ಲಿ ಅಮೆರಿಕನ್ ಮಿತ್ರಪಡೆಗಳ ಅಫ್ಘಾನ್ ಅತಿಕ್ರಮಣದ ನಂತರ ಅಲ್‌ಖಾಯಿದ ಮತ್ತು ತಾಲಿಬಾನ್‌ಗಳಿಗೆ ನೆರವು ನೀಡುತ್ತಿದ್ದಾರೆಂದು ಆರೋಪಿಸಿ ಇವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿತ್ತು ಎಂದು ವರದಿತಿಳಿಸಿದೆ.