ಸುಚಿತ್ರಾ ಹೊಳ್ಳರಿಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಪ್ರದಾನ
ಉಡುಪಿ. ಫೆ.5: ಉಡುಪಿ ರಾಗಧನ ಸಂಸ್ಥೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಶ್ರೀಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಎರಡನೆ ದಿನವಾದ ಶನಿವಾರ ಪುತ್ತೂರಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಸುಚಿತ್ರಾ ಹೊಳ್ಳ ಅವರಿಗೆ ‘ರಾಗಧನ ಪಲ್ಲವಿ’ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು. ಡಾ.ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಹಿರಿಯ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಪ್ರಯೋಜಿಸಿರುವ ಪ್ರಶಸ್ತಿಯನ್ನು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಸ್.ಆರ್. ಪ್ರದಾನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಗಧನ ಅಧ್ಯಕ್ಷ ಎ.ಈಶ್ವರಯ್ಯ ಮಾತನಾಡಿ, ರಸಸೃಷ್ಟಿ ಉಂಟು ಮಾಡುವ ಪ್ರಕ್ರಿಯೆಯನ್ನು ಕಲೆ ಎನ್ನುತ್ತಾರೆ. ರಸಸೃಷ್ಟಿ ಆಗಬೇಕಾದ್ದು ಕೇಳುಗರಲ್ಲಿ. ಅವರನ್ನು ತಲುಪಲು ಮಾಧುರ್ಯದಿಂದ ಮಾತ್ರ ಸಾಧ್ಯ. ಇದು ಹೃದಯ ತಲುಪುವ ಭಾಷೆ ಎಂದರು. ಐವತ್ತು ಅರವತ್ತು ವರ್ಷಗಳ ಹಿಂದೆ ಹೆಣ್ಮಕ್ಕಳು ಕೇವಲ ದೇವರ ನಾಮ ಹಾಡಲು ಸೀಮಿತವಾಗಿದ್ದರು. ಅವರಿಂದ ಪಲ್ಲವಿ ಹಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ ನಾವು ಯಾರಿಗೂ ಕಮ್ಮಿಯಿಲ್ಲ ಎಂದು ಮಹಿಳಾ ಗಾಯಕಿಯರು ಸಾಧಿಸಿ ತೋರಿಸಿದ್ದಾರೆ ಎಂದವರು ಹೇಳಿದರು.
ಡಾ.ಯು.ಪಿ.ಉಪಾಧ್ಯಾಯ, ರಾಗಧನದ ಕಾರ್ಯದರ್ಶಿ ಉಮಾಶಂಕರಿ ಉಪಸ್ಥಿತರಿದ್ದರು. ಬಳಿಕ ಸುಚಿತ್ರಾ ಹೊಳ್ಳರಿಂದ ಸಂಗೀತ ಕಚೇರಿ ನಡೆಯಿತು.