ಜಂತುಹುಳ ನಿರ್ಮೂಲನಾ ದಿನಾಚರಣೆ : ದ.ಕ. ಜಿಲ್ಲೆಯ 4,40,782 ಮಕ್ಕಳಿಗೆ ಮಾತ್ರೆ ನೀಡಲು ಗುರಿ
ಮಂಗಳೂರು, ಫೆ.5: ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ಫೆ.10ರಂದು ದ.ಕ.ಜಿಲ್ಲೆಯ 1ರಿಂದ 19 ವರ್ಷದೊಳಗಿನ 4,40,782 ಮಕ್ಕಳಿಗೆ ‘ಮಾತ್ರೆ’ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.
ಜಿಲ್ಲೆಯಲ್ಲಿ 1ರಿಂದ 5 ವರ್ಷದೊಳಗಿನ 1,15,653 ಮತ್ತು 6ರಿಂದ 10 ವರ್ಷದೊಳಗಿನ 1,46,243 ಹಾಗು 11ರಿಂದ 19 ವರ್ಷದೊಳಗಿನ 1,78,886 ಮಕ್ಕಳಿದ್ದು ಎಲ್ಲರಿಗೂ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಾತ್ರೆ ನೀಡಲು ಉದ್ದೇಶಿಸಲಾಗಿದೆ. ಇದು ಉಚಿತವಾಗಿ ಸಿಗುವ ಮಾತ್ರೆಯಾಗಿದ್ದು, ಅಭಿಯಾನದ ಯಶಸ್ಸಿಗಾಗಿ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕ ವರ್ಗವನ್ನು ಬಳಸಿಕೊಳ್ಳಲಾಗುತ್ತದೆ.ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಕೈ ಜೋಡಿಸಿದೆ.
ಏನಿದು ಜಂತುಹುಳ?: ಮನುಷ್ಯನ ಕರುಳಿನಿಂದ ಆಹಾರವನ್ನು ಪಡೆದು ಜೀವಿಸುವಂತಹ ಉಪಜೀವಿಯೇ ಜಂತುಹುಳ. ಬರಿಗಾಲಿನಲ್ಲಿ ಬಯಲಿನಲ್ಲ ಆಟವಾಡಿದರೆ, ಕೈಗಳನ್ನು ತೊಳೆಯದೆ ಆಹಾರ ಸೇವಿಸಿದರೆ, ಬಾಹ್ಯ ಪ್ರದೇಶ ಅಥವಾ ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದರೆ, ಶೌಚ ಮಾಡಿದ ಬಳಿಕ ಕೈಗಳನ್ನು ಸರಿಯಾಗಿ ತೊಳೆಯದಿದ್ದರೆ, ತರಕಾರಿ- ಹಣ್ಣು ಹಂಪಲುಗಳನ್ನು ತೊಳೆಯದೆ ಸೇವಿಸಿದರೆ, ಆಹಾರ ಪದಾರ್ಥಗಳನ್ನು ಮುಚ್ಚಿಡದಿದ್ದರೆ ಜಂತುಹುಳ ಹರಡುವ ಸಾಧ್ಯತೆ ಇದೆ.
ಜಂತುಹುಳ ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದಲೂ ಜಂತುಹುಳ ಭಾದೆ ಹರಡುತ್ತದೆ. ಅಂದರೆ ಜಂತುಹುಳ ಸೋಂಕಿನ ಮಗು ಮಲವಿಸರ್ಜನೆ ಮಾಡಿದಾಗ ಮಣ್ಣಿನಲ್ಲಿ ಜಂತುಹುಳದ ಮೊಟ್ಟೆಗಳು ಸೇರುತ್ತದೆ. ಈ ಮೊಟ್ಟೆಗಳು ಕ್ರಮೇಣ ಲಾರ್ವಗಳಾಗಿ ಬೆಳೆಯಲಿದೆ. ಈ ಲಾರ್ವಾಗಳು ಮತ್ತೆ ಮೊಟ್ಟೆಗಳನ್ನು ಇಟ್ಟು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ.
ಏನೇನು ಆಗುತ್ತದೆ: ಜಂತುಹುಳ ಭಾದೆಯಿಂದ ಹೊಟ್ಟೆನೋವು, ಭೇದಿ, ಹಸಿವು ಇಲ್ಲದಿರವುದು, ಸುಸ್ತು ಇತ್ಯಾದಿ ಆಗಲಿದೆ. ಜಂತುಹುಳವು ರಕ್ತವನ್ನು ಹೀರುವುದರಿಂದ ಮಕ್ಕಳಲ್ಲಿ ರಕ್ತಹೀನತೆ ಉಂಟಾಗುತ್ತದೆ. ಅಲ್ಲದೆ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕಾಂಶಗಳನ್ನು ಜಂತುಹುಳ ಹೀರುವುದರಿಂದ ಮಕ್ಕಳಲ್ಲಿ ಅಪೌಷ್ಠಿಕತೆ ಉಂಟಾಗುತ್ತದೆ.
►1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತುಹುಳ ನಿವಾರಣಾ (ಆಲ್ಬೆಂಡರೆಲ್ 400 ಮಿ.ಗ್ರಾಂ) ಮಾತ್ರೆಯನ್ನು ನೀಡಲಾಗುತ್ತದೆ. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮತ್ತು 2ರಿಂದ 19 ವರ್ಷದೊಳಗಿನ ಮಕ್ಕಳಿಗೆ ಪೂರ್ಣ ಮಾತ್ರೆಯನ್ನು ನೀಡಲಾಗುತ್ತದೆ. 6ರಿಂದ 19 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಕರು ಮತ್ತು 1ರಿಂದ 5 ವರ್ಷದೊಳಗಿನ ಹಾಗು ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವುದು. ಫೆ.10ರಂದು ಮಾತ್ರೆ ಪಡೆಯದವರು ಫೆ.16ರಂದು ಪಡೆದು ಸೇವಿಸಬೇಕು.