ಸ್ಕೌಟ್ಸ್ ಮತ್ತು ಗೈಡ್ಸ್‌ನ ತೃತೀಯ ಸೋಪಾನ ಪ್ರಶಸ್ತಿ ಪತ್ರ ಪ್ರದಾನ
ಮಂಗಳೂರು, ಫೆ. 5: ‘ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ’ ಇದರ ದ.ಕ.ಜಿಲ್ಲಾ ಘಟಕದ ವತಿಯಿಂದ ತೃತೀಯ ಸೋಪಾನ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ ನಗರದ ಪುರಭವನದಲ್ಲಿ ರವಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಹಾಗು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಭಾರತೀಯ ಸ್ಕೌಟ್-ಗೈಡ್ಸ್ 2017-18ನೆ ಸಾಲಿನ ರಾಜ್ಯಮಟ್ಟದ ಜಾಂಬೋರೇಟ್ ದ.ಕ. ಜಿಲ್ಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರೋವರ್ಸ್ ಹಾಗೂ ರೇಂಜರ್ಸ್‌ಗಳಿಗೆ ಜಲ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುವ ರಾಷ್ಟ್ರಮಟ್ಟದ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸೂಕ್ತ ಸ್ಥಳಾವಕಾಶವನ್ನು ಜಿಲ್ಲಾಡಳಿತ ನೀಡಬೇಕಾಗಿದೆ ಎಂದರು.
ಸ್ಕೌಟ್-ಗೈಡ್ಸ್‌ನಲ್ಲಿ ಸುಮಾರು 80 ರೀತಿಯ ತರಬೇತಿಗಳಿದೆ. ಅದರಲ್ಲಿ ಸಾಹಸ ಚಟುವಟಿಕೆಗಳೂ ಸೇರಿವೆ. ಮಕ್ಕಳಿಗೆ ಈ ತರಬೇತಿಗಳನ್ನು ನೀಡುವುದರಿಂದ ಸೇನೆ, ಪೊಲೀಸ್ ಇಲಾಖೆಗೆ ಅವರು ಸೇರಲು ಸಾಧ್ಯವಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ರಾಷ್ಟ್ರಪತಿ, ರಾಜ್ಯಪಾಲರಿಂದ ಪುರಸ್ಕಾರ ಪಡೆಯುವವರಲ್ಲಿ ದ.ಕ.ಜಿಲ್ಲೆಯವರು ಹೆಚ್ಚಿದ್ದಾರೆ. ಸ್ಕೌಟ್ಸ್ ಹಾಗೂ ಗೈಡ್ಸ್‌ನಲ್ಲಿ ದ.ಕ.ಜಿಲ್ಲೆ ಮೊದಲನೇ ಸ್ಥಾನವನ್ನು ಗಳಿಸಿದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಮಾತನಾಡಿ, ಪಾಶ್ಚಿಮಾತ್ಯ ದೇಶಗಳು ಭಾರತಕ್ಕಿಂತ ಎಲ್ಲ ರೀತಿಯಲ್ಲೂ ಮುಂದುವರಿದಿವೆ. ನಮ್ಮಲ್ಲಿ ನೈಸರ್ಗಿಕ ಸಂಪತ್ತು ಅಧಿಕವಾಗಿದ್ದರೂ ಶಿಸ್ತು ಹಾಗೂ ನೈರ್ಮಲ್ಯದ ಕೊರತೆ ಇದೆ. ಹೊರರಾಷ್ಟ್ರಗಳು ಸ್ವಚ್ಛತೆಯಿಂದಿರಲು ಅಲ್ಲಿನ ಜನರಲ್ಲಿರುವ ಶಿಸ್ತು ಕಾರಣವಾಗಿದೆ. ಅಲ್ಲಿ ಕಾಯಿಲೆಗಳ ಪ್ರಮಾಣವೂ ಕಡಿಮೆ. ಕಾಯ್ದೆಗಳು ಜನರ ಒಳಿತಾಗಿ ಇದೆಯೇ ಹೊರತು ಪೊಲೀಸರಿಗಾಗಿ ಅಲ್ಲ. ನಮ್ಮಲ್ಲಿ ಬುದ್ಧಿವಂತಿಕೆ, ನೈಸರ್ಗಿಕ ಸಂಪನ್ಮೂಲಕ್ಕೆ ಯಾವುದೇ ಕೊರತೆಯಿಲ್ಲ. ಆದರೆ, ಶಿಸ್ತಿನ ಕೊರತೆ ಇದೆ. ಹಾಗಾಗಿ ಎಳೆಯ ಪ್ರಾಯದಲ್ಲಿ ಶಿಸ್ತು ಬೆಳೆಸಲು ಉತ್ತೇಜನ ನೀಡುವ ಅಗತ್ಯವಿದೆ ಎಂದರು.
ಸ್ಕೌಟ್ಸ್- ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್, ಸ್ಕೌಟ್‌ನ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಗೈಡ್‌ನ ಜಿಲ್ಲಾ ಆಯುಕ್ತ ಐರಿನ್ ಡಿಕುನ್ಹ, ಜಿಲ್ಲಾ ಕೋಶಾಧಿಕಾರಿ ವಾಸುದೇವ ಬೋಳೂರು, ಮಂಗಳೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ವಸಂತ ರಾವ್ ಮತ್ತಿತರರು ಉಪಸ್ಥಿತರಿದ್ದರು.