×
Ad

ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಮೊತ್ತ ಮೀಸಲಿಡುವಲ್ಲಿ ವಿಫಲ : ಸುಪ್ರೀಂ ಕೋರ್ಟ್ ಹಿರಿಯ ವಕೀಲ ಫಿರೋಜ್

Update: 2017-02-05 20:34 IST

ಉಡುಪಿ, ಫೆ.6: ನೋಟು ರದ್ದತಿಯಿಂದ ದೇಶದ ರೈತರು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿರುವುದರಿಂದ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅವರ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಹೆಚ್ಚಿನ ಮೊತ್ತವನ್ನು ಮೀಸಲಿರಿಸ ಬೇಕಾಗಿತ್ತು ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಿರೋಜ್ ಬಿ. ಅಂಧ್ಯಾರುಜಿನಾ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಕೌನ್ಸಿಲ್‌ನ ಉಡುಪಿ ಶಾಖೆಯ ವತಿಯಿಂದ ಲೆಕ್ಕಪರಿಶೋಧಕ ದಿ.ಸುಧೀರ್ ರಾವ್ ಸ್ಮರಣಾರ್ಥ ರವಿವಾರ ಉಡುಪಿ ಡಯಾನ ಹೊಟೇಲ್ ಸಭಾಂಗಣ ದಲ್ಲಿ ಆಯೋಜಿಸಲಾದ ಕೇಂದ್ರ ಬಜೆಟ್ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತಿದ್ದರು.

ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಭಾರತದಲ್ಲಿ ಕೃಷಿಯೇ ಮೂಲವಾಗಿದೆ. ರಾಷ್ಟ್ರೀಯ ಬ್ಯಾಂಕ್‌ಗಳಂತೆ ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘಗಳು ಕೂಡ ಸರಕಾರಕ್ಕೆ ತೆರಿಗೆ ಪಾವತಿಸುತ್ತದೆ. ಆ ತೆರಿಗೆಗೆ ಕೃಷಿಯೇ ಮೂಲವಾಗಿದೆ. ಆ ಮೂಲಕ ಗ್ರಾಮೀಣ ಆರ್ಥಿಕತೆ ದೇಶಕ್ಕೆ ಬಲ ತುಂಬುತ್ತಿದೆ. ಕೃಷಿಯಿಂದ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗದೆ ಇರುವುದರಿಂದ ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿತ್ತು ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಉತ್ತಮ ಅಂಶ ವಾಗಿದೆ. ಆದರೆ 10ಲಕ್ಷದಿಂದ ಮೇಲ್ಪಟ್ಟು 50 ಲಕ್ಷದವರೆಗಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಿರುವುದು ಸರಿಯಲ್ಲ. ಅದರ ಪ್ರಮಾಣ ಇಳಿಸ ಬೇಕಾಗಿತ್ತು. 50 ಲಕ್ಷದಿಂದ 1 ಕೋಟಿ ರೂ.ವರೆಗಿನ ಆದಾಯಕ್ಕೆ ವಿಧಿಸಿ ರುವ ಸರ್‌ಚಾರ್ಜ್‌ನಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಬೆಂಗಳೂರಿನ ಲೆಕ್ಕಪರಿಶೋಧಕ ಶರತ್ ರಾವ್ ಭಾಗವಹಿಸಿದ್ದರು. ಉಡುಪಿ ಶಾಖೆಯ ಅಧ್ಯಕ್ಷ ಗಣೇಶ್ ಬಿ.ಕಾಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ರೇಖಾ ದೇವಾನಂದ ಕಾರ್ಯಕ್ರಮ ನಿರೂ ಪಿಸಿದರು.ಕೋಶಾಧಿಕಾರಿ ಮಹೀಂದ್ರ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News