ಭಯೋತ್ಪಾದನೆ ನಿಗ್ರಹ ಸಮಿತಿಗೆ ಸದಸ್ಯರನ್ನು ಹೆಸರಿಸುವಂತೆ ಭಾರತಕ್ಕೆ ವಿಶ್ವಸಂಸ್ಥೆ ಸೂಚನೆ
ಹೊಸದಿಲ್ಲಿ,ಫೆ.5: ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ನಾಯಕರ ನಿಷೇಧ ಕುರಿತು ನಿರ್ಧರಿಸುವ ವಿಶ್ವಸಂಸ್ಥೆ ಸಮಿತಿಗೆ ನೆರವಾಗಲು ಜಾಗತಿಕ ತಂಡದಲ್ಲಿ ಸೇರ್ಪಡೆಗಾಗಿ ತನ್ನ ಪ್ರತಿನಿಧಿಯ ಹೆಸರನ್ನು ಕಳುಹಿಸುವಂತೆ ವಿಶ್ವಸಂಸ್ಥೆಯು ಭಾರತಕ್ಕೆ ಸೂಚಿಸಿದೆ.
ವಿಶ್ವಸಂಸ್ಥೆಯ ಮನವಿಯ ಹಿನ್ನೆಲೆಯಲ್ಲಿ ಸೂಕ್ತ ವ್ಯಕ್ತಿಗಳ ಹೆಸರುಗಳನ್ನು ಶಿಫಾರಸು ಮಾಡುವಂತೆ ಕೇಂದ್ರವು ಗೃಹ ವ್ಯವಹಾರಗಳ ಮತ್ತು ವಿತ್ತ ಸಚಿವಾಲಯಗಳಿಗೆ ಸೂಚಿಸಿದೆ.
ಸಮಿತಿಯಲ್ಲಿ ದೇಶದ ಪ್ರತಿನಿಧಿಯ ಉಪಸ್ಥಿತಿ ಪಾಕಿಸ್ತಾನದ ಭಯೋತ್ಪಾದಕ ಗುಂಪು ಜೈಷ್-ಎ-ಮುಹಮ್ಮದ್‌ನ ಮುಖ್ಯಸ್ಥ ಹಾಗೂ ಕಳೆದ ವರ್ಷದ ಪಠಾಣ್‌ಕೋಟ್ ವಾಯುನೆಲೆಯ ಮೇಲಿನ ಭಯೋತ್ಪಾದಕ ದಾಳಿಯ ರೂವಾರಿ ಮಸೂದ್ ಅಝರ್‌ನನ್ನು ನಿಷೇಧಕ್ಕೊಳಪಡಿಸುವ ಭಾರತದ ಪ್ರಯತ್ನಗಳಿಗೆ ಅನುಕೂಲಿಸಬಹುದು.
ಅಲ್-ಕಾಯದಾ ಮತ್ತು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ವಿಶ್ವಸಂಸ್ಥೆಯ ನಿರ್ಬಂಧಗಳ ಪಟ್ಟಿಯಲ್ಲಿ ಅಝರ್ ಹೆಸರನ್ನು ಸೇರ್ಪಡೆಗೊಳಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಪದೇಪದೇ ಅಡ್ಡಗಾಲು ಹಾಕುತ್ತಿದೆ.
ಭಾರತವು ಕಳೆದ ವರ್ಷದ ಫೆಬ್ರವರಿಯಲ್ಲಿ ತನ್ನ ಪ್ರತಿನಿಧಿಯ ಹೆಸರನ್ನು ರವಾನಿಸಿತ್ತಾದರೂ ವಿಶ್ವಸಂಸ್ಥೆಯು ಅದನ್ನು ತಿರಸ್ಕರಿಸಿತ್ತೆನ್ನಲಾಗಿದೆ.
ವಿಶ್ವಸಂಸ್ಥೆಯ ಈ ತಂಡದ ಸದಸ್ಯರಾಗುವವರು ಅಲ್-ಕಾಯದಾ,ಐಸಿಸ್ ಮತ್ತು ಅವುಗಳ ನಂಟು ಹೊಂದಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಅಗತ್ಯವಾಗಿದೆ.