‘ಸ್ಕಾಮ್ ’ ವ್ಯಂಗ್ಯ : ಮೋದಿಗೆ ರಾಹುಲ್ ತಿರುಗೇಟು
ಕಾನ್ಪುರ,ಫೆ.5: ಪ್ರಧಾನಿ ನರೇಂದ್ರ ಮೋದಿಯವರ ‘ಸ್ಕಾಮ್’(ಹಗರಣ) ವ್ಯಂಗ್ಯಕ್ಕಾಗಿ ಅವರನ್ನು ಇಂದು ತರಾಟೆಗೆತ್ತಿಕೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ತಪ್ಪು ಮಾಡಿದವರಿಗೆ ಎಲ್ಲಿ ನೋಡಿದರೂ ಹಗರಣಗಳೇ ಕಾಣುತ್ತವೆ ಎಂದು ಹೇಳಿದರೆ ಅವರ ಮಿತ್ರಪಕ್ಷ ಎಸ್‌ಪಿಯ ಮುಖ್ಯಸ್ಥ ಅಖಿಲೇಶ್ ಯಾದವ ಅವರು,ಮೋದಿಯವರು ಹೇಳಿರುವ ‘ಸ್ಕಾಮ್’ನ ಅರ್ಥ ‘ಸೇವ್ ಕಂಟ್ರಿ ಫ್ರಮ್ ಅಮಿತ್ ಶಾ ಆ್ಯಂಡ್ ಮೋದಿ(ಅಮಿತ್ ಶಾ ಮತ್ತು ಮೋದಿಯವರಿಂದ ದೇಶವನ್ನು ರಕ್ಷಿಸಿ) ’ಎಂದಾಗುತ್ತದೆ ಎಂದು ಕುಟುಕಿದರು.
ಶನಿವಾರ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಮೋದಿ,ರಾಜ್ಯವನ್ನು ‘ಸ್ಕಾಮ್’ನಿಂದ ಮುಕ್ತಗೊಳಿಸಿ ಎಂದು ಜನತೆಯನ್ನು ಕೇಳಿಕೊಂಡಿದ್ದರು. ಎಸ್(ಸಮಾಜವಾದಿ ಪಾರ್ಟಿ),ಸಿ(ಕಾಂಗ್ರೆಸ್),ಎ(ಅಖಿಲೇಶ್) ಮತ್ತು ಎಂ(ಮಾಯಾವತಿ) ಎಂದು ಅವರು ಈ ಸ್ಕಾಮ್ ಅನ್ನು ವಿವರಿಸಿದ್ದರು.
ಕಾನ್ಪುರದಲ್ಲಿ ಅಖಿಲೇಶ್ ಜೊತೆ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್,ಮೋದಿ ಅಂಜಿಕೆಗೊಳಗಾದಾಗೆಲ್ಲ ಪಿಪಿಇ,ಎಬಿಸಿ,ಎಸ್‌ಸಿಎಎಂ...ಹೀಗೆಲ್ಲ ಲೇಬಲ್‌ಗಳನ್ನು ಹಚ್ಚುತ್ತಲೇ ಇರುತ್ತಾರೆ. ಸ್ವತಃ ತಪ್ಪು ಮಾಡಿದವರಿಗೆ ಎಲ್ಲ ಕಡೆಯೂ ಸ್ಕಾಮ್(ಹಗರಣ)ಗಳೇ ಕಾಣುತ್ತಿರುತ್ತವೆ ಎಂದರು.
ಮೋದಿಯವರು ಯುವಜನರಿಗೆ ಹೆದರಿಕೊಂಡಿದ್ದಾರೆ. ಉದ್ಯೋಗದ ಭರವಸೆಯನ್ನಷ್ಟೇ ನೀಡಿ ವಂಚಿಸಿರುವ ಮೋದಿಗೆ ಯುವಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಮೋದಿ ಆ ರಾಜ್ಯದ ಹೆಸರನ್ನೇ ಮರೆತಿರುವಂತೆ ಇಲ್ಲಿಯ ಯುವಜನರು ಅವರು ಉತ್ತರ ಪ್ರದೇಶದ ಹೆಸರನ್ನೂ ಮರೆಯುವಂತೆ ಮಾಡಲಿದ್ದಾರೆ ಎಂದರು.
ಮೋದಿ ಸರಕಾರವು ಜನರಿಗೆ ಸುಳ್ಳು ಭರವಸೆಗಳ ಹೊರತು ಬೇರೇನನ್ನೂ ನೀಡಿಲ್ಲ ಎಂದು ಅಖಿಲೇಶ್ ಅರೋಪಿಸಿದರು.