ಬಡ್ಡಿ ವ್ಯವಹಾರ: ಆರೋಪಿ ಬಂಧನ
ಮಂಗಳೂರು, ಫೆ. 5: ಬಡ್ಡಿ ವ್ಯವಹಾರ ನಡೆಸುತ್ತಾ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೊಕ್ಕಪಟ್ಣದ ನಿವಾಸಿ ಶಾನ್ ಡಿ’ಸೋಜಾ (36) ಬಂಧಿತ ಆರೋಪಿ.
ಆರೋಪಿ ಶಾನ್ ಡಿ’ಸೋಜಾನಿಂದ ವಿವಿಧ ಬ್ಯಾಂಕುಗಳ ಸುಮಾರು 80 ಖಾಲಿ ಚೆಕ್‌ಗಳು, 5 ಸ್ಟಾಂಪ್ ಪೇಪರ್ ಮತ್ತು 7,500 ರೂ. ನಗದು ವಶ ಪಡಿಸಿಕೊಂಡಿದ್ದಾರೆ.
ಶಾನ್ ಡಿ’ಸೋಜಾ ಕಡಿಮೆ ಬಡ್ಡಿಗೆ ಹಣ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಅವರಿಂದ ಖಾಲಿ ಚೆಕ್‌ಗಳನ್ನು ಪಡೆದು ಅದರಲ್ಲಿ ಅಧಿಕ ಮೊತ್ತವನ್ನು ನಮೂದಿಸುತ್ತಿದ್ದನೆಂದು ಆರೋಪಿಸಲಾಗಿದೆ. ಹಣ ನೀಡದಿದ್ದರೆ ಚೆಕ್ ಬೌನ್ಸ್ ಕೇಸು ಹಾಕಿ ಜನರನ್ನು ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಂತಹ ಕಿರುಕುಳ ಪ್ರಕರಣಗಳ ಬಗ್ಗೆ ಕೆಲವೆಡೆಗಳಿಂದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ರವಿವಾರ ಬೊಕ್ಕಪಟ್ಣದಲ್ಲಿರುವ ಆತನ ಮನೆಗೆ ದಾಳಿ ನಡೆಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.