×
Ad

ಉಳ್ಳಾಲ ನಗರಸಭೆ ಉಪಚುನಾವಣೆ

Update: 2017-02-06 17:49 IST

ಮಂಗಳೂರು, ಫೆ.6: ಉಳ್ಳಾಲ ನಗರಸಭೆಯ ಎರಡು ವಾರ್ಡ್‌ಗೆ ಫೆ.12ರಂದು ನಡೆಯುವ ಉಪಚುನಾವಣೆಯ ಪ್ರಚಾರ ಕಾವೇರತೊಡಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಯಾರ್ಯಾರು ಎಂದು ಸ್ಪಷ್ಟಗೊಳ್ಳುತ್ತಲೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ಬೆಂಬಲಿಗರಲ್ಲಿ ಹೊಸ ಹುರುಪು ಕಂಡು ಬಂದಿದೆ.

ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಯು.ಟಿ.ಖಾದರ್ ರವಿವಾರ 24ನೆ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿಪರ ನಡೆದ ಬಹಿರಂಗ ಸಭೆಯಲ್ಲಿ ಮತಯಾಚಿಸಿದ್ದಾರೆ. ಮನೆಮನೆ ಭೇಟಿಗೂ ಚಾಲನೆ ನೀಡಿದ್ದಾರೆ. ಈ ಮಧ್ಯೆ ಬಿಜೆಪಿ ಮತ್ತು ಜೆಡಿಎಸ್, ಸಿಪಿಎಂ ಹಾಗು ಪಕ್ಷೇತರ ಅಭ್ಯರ್ಥಿಗಳು ಕೂಡ ಪ್ರಚಾರ ಆರಂಭಿಸಿದ್ದಾರೆ.

1996ರಲ್ಲಿ ನಗರ ಪಂಚಾಯತ್ ಆಗಿದ್ದ ಉಳ್ಳಾಲ 2006ರಲ್ಲಿ ಪುರಸಭೆಯಾಗಿತ್ತು. 2013ರಲ್ಲಿ 27 ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 7, ಎಸ್‌ಡಿಪಿಐ 1 ಹಾಗು ಇಬ್ಬರು ಪಕ್ಷೇತರರು ಗೆದ್ದಿದ್ದರು. 24ನೆ ಚೆಂಬುಗುಡ್ಡೆ ವಾರ್ಡ್‌ನಿಂದ ಗೆದ್ದ ಕಾಂಗ್ರೆಸ್‌ನ ಬಾಝಿಲ್ ಡಿಸೋಜ ಮತ್ತು 26ನೆ ವಾರ್ಡ್‌ನಿಂದ ಗೆದ್ದ ಕಾಂಗ್ರೆಸ್‌ನ ಉಸ್ಮಾನ್ ಕಲ್ಲಾಪು ವಿರುದ್ಧ ಸೋತ ಅಭ್ಯರ್ಥಿಗಳಾದ ಅನಿಲ್‌ದಾಸ್ ಮತ್ತು ದಿನಕರ ಉಳ್ಳಾಲ ನ್ಯಾಯಾಲಯದ ಮೆಟ್ಟಲೇರಿದ್ದರು.

ಅಂದರೆ ನಾಮಪತ್ರ ಸಲ್ಲಿಕೆ ಸಂದರ್ಭ ಇವರಿಬ್ಬರೂ ಅಫಿದವಿತ್‌ನಲ್ಲಿ ತಮ್ಮ ಕ್ರಿಮಿನಲ್ ಮೊಕದ್ದಮೆ ಬಗ್ಗೆ ಉಲ್ಲೇಖಿಸಿಲ್ಲ ಎಂದು ತಕರಾರು ತೆಗೆದಿದ್ದರು. ಪ್ರಕರಣ ಹೈಕೋರ್ಟ್-ಸುಪ್ರೀಂ ಕೋರ್ಟ್ ಮೆಟ್ಟಲೇರಿ ಅಂತಿಮವಾಗಿ ಮರು ಚುನಾವಣೆಗೆ ಆದೇಶ ನೀಡಿತ್ತು. ಅದರಂತೆ ಫೆ.12ರಂದು ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಫೆ.15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಹಾಲಿ ನಗರಸಭೆಯ ಆಡಳಿತಾವಧಿಯು 2018ರ ಸೆಪ್ಟಂಬರ್‌ವರೆಗಿದ್ದು, ಮತ್ತೆ ಎಲ್ಲ ವಾರ್ಡ್‌ಗೂ ಚುನಾವಣೆ ನಡೆಯಲಿದೆ.
ಎರಡೂ ವಾರ್ಡ್‌ನಲ್ಲಿ ತಲಾ 5 ಮಂದಿ ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ಇಬ್ಬರು ಪಕ್ಷೇತರರು ಕಣದಿಂದ ಹಿಂದೆ ಸರಿದಿದ್ದು, ಇದೀಗ ಎರಡೂ ವಾರ್ಡ್‌ನಲ್ಲಿ ತಲಾ 4 ಮಂದಿ ಕಣದಲ್ಲಿದ್ದಾರೆ. ಇದಲ್ಲಿ ಇಬ್ಬರು ಈ ಹಿಂದೆ ಗೆದ್ದ ಹಾಗು ಇಬ್ಬರು ಸೋತ ಅಭ್ಯರ್ಥಿಗಳೂ ಇದ್ದಾರೆ. ಎರಡೂ ವಾರ್ಡ್‌ನಲ್ಲಿ ಸಿಪಿಎಂ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ.

24ನೆ ವಾರ್ಡ್: ಇಲ್ಲಿ 728 ಪುರುಷ ಮತ್ತು 792 ಮಹಿಳೆಯರ ಸಹಿತ 1,520 ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಬಾಝಿಲ್ ಡಿಸೋಜ, ಬಿಜೆಪಿಯಿಂದ ಸತೀಶ್ ಚೆಂಬುಗುಡ್ಡೆ, ಸಿಪಿಎಂನಿಂದ ಹರೀಶ್ ಶೆಟ್ಟಿ, ಪಕ್ಷೇತರನಾಗಿ ಅಬ್ದುಲ್ ಕಲಂದರ್ ಕಣದಲ್ಲಿದ್ದಾರೆ. ಮುಸ್ಲಿಂ ಮತದಾರರೇ ಅಧಿಕ ಸಂಖ್ಯೆಯಲ್ಲಿರುವ ಇಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ. ಇಲ್ಲಿ ಜೆಡಿಎಸ್ ಸಿಪಿಎಂಗೆ ಬೆಂಬಲ ಸಾರಿದೆ.

26ನೆ ವಾರ್ಡ್: ಇಲ್ಲಿ 690 ಪುರುಷ ಮತ್ತು 688 ಮಹಿಳೆಯರ ಸಹಿತ 1,378 ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಉಸ್ಮಾನ್ ಕಲ್ಲಾಪು, ಬಿಜೆಪಿಯಿಂದ ಚಂದ್ರಹಾಸ ಪಂಡಿತ್ ಹೌಸ್, ಜೆಡಿಎಸ್‌ನಿಂದ ಎಚ್.ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಪಕ್ಷೇತರನಾಗಿ ದಿನಕರ ಉಳ್ಳಾಲ ಕಣದಲ್ಲಿದ್ದಾರೆ. ಉಸ್ಮಾನ್ ಕಲ್ಲಾಪು ಕಳೆದ ಬಾರಿಯ ವಿಜೇತ ಅಭ್ಯರ್ಥಿ.

ಕಳೆದ ಬಾರಿ ಸೋತ ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ ವಿಜೇತ ಅಭ್ಯರ್ಥಿಯ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದರು. ದಿನಕರ ಉಳ್ಳಾಲ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಪಕ್ಷೇತರನಾಗಿ ಕಣಕ್ಕಿಳಿದಿದ್ದರೆ ಇದೀಗ ಇಬ್ಬರು ಮತ್ತೆ ಮುಖಾಮುಖಿಯಾಗಿದ್ದಾರೆ. ಈ ವಾರ್ಡ್‌ನಲ್ಲಿ ಮುಸ್ಲಿಂ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದರೂ ನಾಲ್ಕು ಅಭ್ಯರ್ಥಿಗಳ ಮಧ್ಯೆ ಬಿರುಸಿನ ಪೈಪೋಟಿ ಇದೆ. ಇಲ್ಲಿ ಸಿಪಿಎಂ ಜೆಡಿಎಸ್‌ಗೆ ಬೆಂಬಲ ನೀಡಿದೆ.
ಕಳೆದ ಬಾರಿ 24ನೆ ವಾರ್ಡ್‌ನಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಸ್ಮಾಯೀಲ್ ಶಾಫಿ ಈ ಬಾರಿ 26ನೆ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಸಾಮಾಜಿಕ ಹಾಗು ಕಾರ್ಮಿಕ ಸಂಘಟನೆಗಳು, ಮಾನವ ಹಕ್ಕುಗಳ ಸಂಘಟನೆ, ಆರ್‌ಟಿಐ ಕಾರ್ಯಕರ್ತನಾಗಿ ಸ್ಥಳೀಯ ಮಟ್ಟದಲ್ಲಿ ಇವರು ಗುರುತಿಸಿಕೊಂಡಿದ್ದಾರೆ.
 

ಎರಡೂ ವಾರ್ಡ್ ಕಾಂಗ್ರೆಸ್‌ನ ಭದ್ರಕೋಟೆ. ಅಲ್ಲದೆ, ಸಚಿವ ಯು.ಟಿ.ಖಾದರ್‌ರ ಕ್ಷೇತ್ರ ವ್ಯಾಪ್ತಿಯೊಳಗಿದೆ. 24ನೆ ವಾರ್ಡ್‌ನಲ್ಲಿ ಪ್ರಬಲ ಪೈಪೋಟಿ ಇಲ್ಲವಾದರೂ, ಮುಸ್ಲಿಮ್ ಮತದಾರರೇ ಅಧಿಕ ಸಂಖ್ಯೆಯಲ್ಲಿರುವ 26ನೆ ವಾರ್ಡ್‌ನಲ್ಲಿ ಪೈಪೋಟಿ ಇರುವ ಕಾರಣ ಕಾಂಗ್ರೆಸ್‌ಗೆ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News