ನಂತೂರು-ತಲಪಾಡಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಕಗರವೇ ಆಗ್ರಹ
ಮಂಗಳೂರು, ಫೆ.6: ರಾ.ಹೆ. 66ರ ನಂತೂರು-ತಲಪಾಡಿ ಚತುಷ್ಪಥ ಅಗಲೀಕರಣ ಯೋಜನೆಯಡಿ ತಲಪಾಡಿ ಗ್ರಾಮದ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಸಿದ್ದಿಕ್ ತಲಪಾಡಿ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂತೂರು-ತಲಪಾಡಿ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ತಲಪಾಡಿ ಗ್ರಾಮದ ಸ್ಥಳೀಯರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಲಪಾಡಿ ವ್ಯಾಪ್ತಿಯಲ್ಲಿ ರಾ.ಹೆ.ಯ ಇಕ್ಕೆಲಗಳಲ್ಲಿ ಸ್ಥಳೀಯ ಸಾರ್ವಜನಿಕರು, ವಾಹನಗಳು, ಜಾನುವಾರುಗಳು ಸಂಚರಿಸಲು ಸಮರ್ಪಕ ಸರ್ವಿಸ್ ರಸ್ತೆ(ಪೂರೈಕಾ ರಸ್ತೆ) ಶೀಘ್ರ ನಿರ್ಮಾಣ ಮಾಡಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು. ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಲಪಾಡಿ ಚೆಕ್‌ಪೋಸ್ಟ್ ಬಳಿ ಸಾರ್ವಜನಿಕ ಬಸ್ ತಂಗುದಾಣ ಮತ್ತು ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕು. ತಲಪಾಡಿ ಗ್ರಾಮದ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡಬೇಕು ಎಂದು ತಿಳಿಸಿದರು.
ರಾ.ಹೆ. ಅಗಲೀಕರಣದ ವೇಳೆ ಭೂಕಳಕೊಂಡ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆಯಾಗಿಲ್ಲ. ಹೆದ್ದಾರಿ ಅಗಲೀಕರಣದ ಕಾಮಗಾರಿ ವೇಳೆ ತಲಪಾಡಿ ಹೊಳೆಗೆ ಮಣ್ಣು ಬಿದ್ದು ಶೇಖರಣೆಗೊಂಡಿದ್ದು, ಶೀಘ್ರ ಹೂಳೆತ್ತಬೇಕು ಮತ್ತು ಹೊಳೆಯ ಪರಿಸರವನ್ನು ನೈರ್ಮಲ್ಯಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಗರವೇ ಗೌರವಾಧ್ಯಕ್ಷ ಅಶ್ಫಕ್ ಕೆ.ಸಿ. ರೋಡ್, ಉಪಾಧ್ಯಕ್ಷ ಅರುಣ್ ಭಂಡಾರಿ, ಗಣೇಶ್ ಶೆಟ್ಟಿ, ಪ್ರಕಾಶ್ ಉಪಸ್ಥಿತರಿದ್ದರು.