ಮನೆ ಧ್ವಂಸ ಆರೋಪ: ನ್ಯಾಯಕ್ಕಾಗಿ ಮಹಿಳೆ ಮನವಿ
ಮಂಗಳೂರು, ಫೆ.6: ಸರಕಾರಿ ವಸತಿ ಯೋಜನೆಯಡಿ 5 ಸೆಂಟ್ಸ್ ಜಾಗದಲ್ಲಿ ಗ್ರಾಪಂನಿಂದ ಪರವಾನಿಗೆ ಪಡೆದು ಮನೆ ಕಟ್ಟಲಾಗಿದ್ದರೂ ಕೂಡ ಏಕಾಏಕಿ ತೆಂಕಮಿಜಾರು ಪಿಡಿಒ ಸಾಯಿಶ್ ಚೌಟ, ಗ್ರಾಪಂ ಅಧ್ಯಕ್ಷ ಸುರೇಶ್ ಯಾನೆ ಬಾಲಕೃಷ್ಣ, ಪಿಡಬ್ಲುಡಿ ಗುತ್ತಿಗೆದಾರ ಮುಹಮ್ಮದ್ ಹುಸೈನ್, ಪಂಚಾಯತ್ ಸಿಬ್ಬಂದಿ ರಾಕೇಶ್ ಭಟ್ ಸೇರಿಕೊಂಡು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ತನಗೆ ಅನ್ಯಾಯವಾಗಿದ್ದು, ಸೂಕ್ತ ಒದಗಿಸಿಕೊಡಬೇಕು ಎಂದು ಕುಕ್ಕುದಕಟ್ಟೆ ಕರಿಕುಮೇರು ಮನೆಯ ಗಿರಿಜಾ ಪೂಜಾರಿ ಮನವಿ ಮಾಡಿದ್ದಾರೆ.
ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ನೋಟಿಸ್ ನೀಡದೆ ಏಕಾಏಕಿ ಮನೆಯನ್ನು ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ತನ್ನ ಮೇಲೆ ಹಲ್ಲೆಗೈದು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಇದರ ವಿರುದ್ಧ ಪಣಂಬೂರು ಎಸಿಪಿ, ಜಿಪಂ, ತಾಪಂ, ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರಲ್ಲದೆ, ಈ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ವಿಶ್ವರಾಜ್ ಪಿ.ಎನ್., ಪದ್ಮನಾಭ, ಲೀಲಾವತಿ, ಮುಹಮ್ಮದ್ ಅಸ್ಗರ್ ಉಪಸ್ಥಿತರಿದ್ದರು.