ಫೆ.10-16: ಸವಣೂರಿನಲ್ಲಿ ‘ರಾಷ್ಟ್ರೀಯ ಯುವ ಸಪ್ತಾಹ-2017’
ಪುತ್ತೂರು,ಫೆ.6: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಫೆ. 10ರಿಂದ 16ರ ತನಕ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಸಚಿನ್ ಎಸ್ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.10ರಂದು ಸುಳ್ಯ ಶಾಸಕ ಅಂಗಾರ ಅವರು ಯುವ ಸಪ್ತಾಹವನ್ನು ಯುವ ಸಭಾ ಭವನದಲ್ಲಿ ಉದ್ಘಾಟಿಸಲಿದ್ದಾರೆ. ಸವಣೂರು ಗ್ರಾ.ಪಂ. ಅಧ್ಯಕ್ಷ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಕೇಶವ ಅಮೀನ್ ನಿದೇರ್ಶನದ ಶಿಮ ಮೆಲೋಡಿಯಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.
ಫೆ.11ರಂದು ವಿದ್ಯಾರಶ್ಮಿ ವಿದ್ಯಾಲಯದ ಬಳಿ ಮುಕ್ತ ಅಂಡ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಸವಣೂರು ವರ್ತಕರ ಸಂಘದ ಅಧ್ಯಕ್ಷ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಸವಣೂರು ಜೆಸಿಐ ಅಧ್ಯಕ್ಷ ವಸಂತ ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.12ರಂದು ಸವಣೂರು ಶಾಲಾ ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಶಿಬಿರವನ್ನು ವೈದ್ಯ ಡಾ. ವಿಶ್ವನಾಥ ಭಟ್ ಕಾನಾವು ಉದ್ಘಾಟಿಸಲಿದ್ದಾರೆ. ಸವಣೂರು ಶಾಲಾ ದಶಮಾನೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.13ರಂದು ಸವಣೂರು ಸರ್ಕಾರಿ ಪ.ಪೂ. ಕಾಲೇಜ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತಯಾರಿ ತರಬೇತಿ ನಡೆಯಲಿದೆ. ತರಬೇತಿಯನ್ನು ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಉದ್ಘಾಟಿಸಲಿದ್ದಾರೆ. ಕಾಲೇಜ್‌ನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ.14ರಂದು ಸವಣೂರು ಯುವ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ವೈದ್ಯ ಡಾ. ಸುಬ್ರಹ್ಮಣ್ಯ ಭಟ್ ಶಿಬಿರ ಉದ್ಘಾಟಿಸಲಿದ್ದಾರೆ. ಸವಣೂರು ಸಹಕಾರಿ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.15ರಂದು ಮಾಧ್ಯಮ ಮತ್ತು ವಿದ್ಯಾರ್ಥಿಗಳು ಉಪನ್ಯಾಸ ನಡೆಯಲಿದ್ದು, ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ ಉದ್ಘಾಟಿಸಲಿದ್ದಾರೆ. ಪ್ರಗತಿ ವಿದ್ಯಾಸಂಸ್ಥೆಯ ಗೌರವ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.16ರಂದು ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತಮ ಯುವ ಮಂಡಳಿ ಪ್ರಶಸ್ತಿ ಮತ್ತು ಯುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ತುಳುನಾಟಕ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ತುಳು ಸಾಹಿತ್ಯ ಅಕಾಡಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಸುಬ್ರಹ್ಮಣ್ಯ ಬಿ, ಜೊತೆ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಮಾಜಿ ಅಧ್ಯಕ್ಷರಾದ ಗಂಗಾಧರ ಮತ್ತು ದಯಾನಂದ ಉಪಸ್ಥಿತರಿದ್ದರು.