ಕಂಬಳ ನಿಷೇಧ ಹೋರಾಟಕ್ಕೆ ನಾಗರಿಕ ಅಭಿವೃದ್ಧಿ ಸಮಿತಿ ಬೆಂಬಲ : ಇಬ್ರಾಹಿಂ ಗೋಳಿಕಟ್ಟೆ
ಪುತ್ತೂರು,ಫೆ.6: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯಂತೆ ಕರ್ನಾಟಕದ ಕರಾವಳಿಯಲ್ಲಿ ಕಂಬಳವು ಬಹಳ ವಿಶೇಷತೆಯ ಒಂದು ಕ್ರೀಡೆಯಾಗಿದ್ದು. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಂಬಳ ಸಮಿತಿ ನಡೆಸುವ ಹೋರಾಟಗಳಿಗೆ ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿಯು ಪೂರ್ಣ ಬೆಂಬಲ ನೀಡಲಿದೆ. ಜಾತಿ ಮತ ಮತ್ತು ರಾಜಕೀಯ ಬೇಧ ಮರೆತು ಎಲ್ಲರೂ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಸಮಿತಿಯ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಒಂದೊಂದು ರಾಜ್ಯದಲ್ಲಿ ಒಂದೊಂದು ಪದೇಶದಲ್ಲಿ ಅಲ್ಲಲ್ಲಿಯ ಜನರ ಜೀವ ನಾನುಸಾರವಾಗಿ ಒಂದೊಂದು ಕ್ರೀಡೆಯನ್ನು ಜನರು ಬಹಳ ಹಿಂದಿನ ಕಾಲದಿಂದಲೂ ನೆಚ್ಚಿಕೊಂಡು ಬಂದಿದ್ದರು. ಅದರಂತೆಯೇ ಕಂಬಳವು ನಮ್ಮ ತುಳುನಾಡಿನ ಬಹಳ ಆಸಕ್ತಿಯ ಕ್ರೀಡೆ ಮತ್ತು ಸಂಸ್ಕ್ರತಿಯಾಗಿದೆ. ಮಾತ್ರವಲ್ಲದೇ ವಿಶೇಷತೆ ಹಲವು ಐಕ್ಯತೆಯ ಸಂದೇಶಗಳೂ ಕೂಡಾ ಅದರಲ್ಲಿದೆ. ಒಂದು ಕಾಲದಲ್ಲಿ ಕಂಬಳದ ಕೋಣ ಓಡಿಸುವ ಗದ್ದೆಯು ಬಹಳ ಫಲಭರಿತ ಭೂಮಿಯಾಗಿತ್ತು. ಕಂಬಳದ ಗದ್ದೆಯ ಬಗ್ಗೆಯೂ ಓಡುವ ಕೋಣಗಳ ಬಗ್ಗೆಯೂ ಮಾತ್ರವಲ್ಲ ಕೋಣವನ್ನು ಓಡಿಸುವ ಓಟಗಾರನ ಬಗ್ಗೆಯೂ ಜನರಿಗೆ ಅಪಾರವಾದ ಪ್ರೀತಿ, ಹೆಮ್ಮೆಯಿದೆ. ಬೇಸಾಯ ಬಿತ್ತನೆ ಕೊಯ್ಲು ಇವಲ್ಲೆದರಲ್ಲೂ ಐಕ್ಯತೆಯಿಂದ ಬೆವರಿಳಿಸಿದ ರೈತ ಭಾಂದವರು ಮೋಜಿಗಾಗಿ ಕಂಬಳದ ಗದ್ದೆಯಲ್ಲಿ ಒಂದುಗೋಡಿ ಯಾವುದೇ ಜಾತಿ ಬೇಧವಿಲ್ಲದೆ ಸಂತಸದ ವಾತಾವರಣವನ್ನು ಹಂಚಿಕೊಳ್ಳುತ್ತಿದರು. ಇಂತಹ ರಸಭರಿತ ಒಂದು ಕ್ರೀಡೆಯು ನಮ್ಮ ಜನರಿಂದ ಕಸಿಯಲ್ಪಡುತ್ತಿದೆ. ನಿಜಕ್ಕೂ ಇದು ಆಘಾತಕಾರಿ ಬೆಳವಣಿಗೆ ಎಂದರು
ಅಸಂತುಷ್ಟಗೊಂಡ ಜನರು ಅಲ್ಲಲ್ಲಿ ಶಬ್ದವೆಬ್ಬಿಸಿ ಹೋರಾಟದ ಬಗ್ಗೆ ರೂಪು ರೇಖೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ನಮ್ಮ ಜನರಲ್ಲಿ ಐಕ್ಯತೆಯ ಕೊರತೆಯಿಂದ ಹೋರಾಟದ ಕಾವು ನಿರೀಕ್ಷೆಯಂತೆ ಫಲ ಕೊಡುತ್ತಿಲ್ಲ. ನಮ್ಮ ಜನರೆಡೆಯಲ್ಲಿ ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಜನರ ಮನಸ್ಸನ್ನು ಹಲವು ಕವಲುಗಳಾಗಿ ಹಂಚಲ್ಪಟ್ಟಿದೆ. ಮೇಲು ಕೀಳು ತಾರತಮ್ಯ ಹೃದಯವನ್ನು ನುಚ್ಚು ನೂರು ಮಾಡಿವೆ. ಹಿಂದೂ ಮುಸ್ಲಿಂ ಭೇದ ಭಾವವಿಲ್ಲದೆ ಒಗ್ಗಟ್ಟಾಗಿ ಹೋರಾಡಿ ಇಡೀ ಭಾರತ ದೇಶದ ಸ್ವಾತಂತ್ರ್ಯವನ್ನೇ ಪಡೆದ ಇತಿಹಾಸವಿದ್ದರೂ ಇದೀಗ ಕಂಬಳ, ನೇತ್ರಾವತಿ, ಕಾವೇರಿ ಹೋರಾಟಗಳು ಒಗ್ಗಟ್ಟಾಗಿ ನಡೆಯುತ್ತಿಲ್ಲ. ಸಮಸ್ಯೆ ವಿರುದ್ದ ನಾವೆಲ್ಲ ಒಂದಾಗಿ ನಿಂತು ಒಗ್ಗಟ್ಟಿನಿಂದ ಹೋರಾಟ ನಡೆಸುವ ಸಮ್ಮನಸ್ಸು ಬಂದಿದ್ದರೆ ಖಂಡಿತವಾಗಿಯೂ ವಿಜಯವು ನಮ್ಮದಾಗುತ್ತಿತ್ತು ಎಂದ ಅವರು ಇದೀಗ ಕಂಬಳ ನಿಷೇಧದ ವಿರುದ್ದ ಎಲ್ಲರೂ ಸೇರಿಕೊಂಡು ಐಕ್ಯತೆಯನ್ನು ಪ್ರದರ್ಶಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗರಿಕ ಅಭಿವೃದ್ಧಿ ಸಮಿತಿ ಪ್ರದಾನ ಕಾರ್ಯದರ್ಶಿ ಸಿ.ಮೋಹನ ಗೌ, ಕಾರ್ಯದರ್ಶಿ ಪಿ.ಎಂ.ಇಬ್ರಾಹಿ ಪರ್ಪುಂಜ, ಜೊತೆ ಕಾರ್ಯದರ್ಶಿ ಅಬ್ದುಲ್ ಅಜೀಜ್ ಬಪ್ಪಳಿಗೆ ಉಪಸ್ಥಿತರಿದ್ದರು.