×
Ad

ನೀರುಳ್ಳಿ ಬಳಸಿ ನಕಲಿ ಕಣ್ಣೀರು ಹಾಕಿದ ಇಸ್ರೇಲ್ ಸಚಿವ!

Update: 2017-02-06 18:19 IST

ಜೆರುಸಲೇಂ, ಫೆ. 6: ಇಸ್ರೇಲ್‌ನ ಆಂತರಿಕ ಸಚಿವ ಆರ್ಯೇ ಡೆರಿ 2015ರ ಚುನಾವಣೆಯ ಸಂದರ್ಭದಲ್ಲಿ, ಮೃತ ರ್ಯಾಬೈ (ಯಹೂದಿ ಧಾರ್ಮಿಕ ಮುಖಂಡ) ಒಬ್ಬರನ್ನು ಸ್ಮರಿಸುವ ವೇಳೆ ಕಣ್ಣೀರು ಸುರಿಸುವುದಕ್ಕಾಗಿ ಈರುಳ್ಳಿಯನ್ನು ಕಣ್ಣಿಗೆ ಉಜ್ಜಿಕೊಂಡಿದ್ದರು ಎಂಬ ಅಂಶ ಬಯಲಾಗಿದೆ.
ಚುನಾವಣಾ ಪ್ರಚಾರ ವೀಡಿಯೊವೊಂದರ ಚಿತ್ರೀಕರಣದ ವೇಳೆ ಅಳುವುದಕ್ಕಾಗಿ ಅವರು ಈ ತಂತ್ರ ಮಾಡಿದ್ದರು.

ಅತಿ ಸಂಪ್ರದಾಯವಾದಿ ಶಾಸ್ ಪಕ್ಷದ ನಾಯಕರಾಗಿರುವ ಡೆರಿ, ಕಣ್ಣಿಗೆ ನೀರುಳ್ಳಿ ಉಜ್ಜುವ ದೃಶ್ಯಗಳನ್ನೊಳಗೊಂಡ ವೀಡಿಯೊವೊಂದು ಈಗ ಬಹಿರಂಗವಾಗಿದೆ. 2013ರ ಅಕ್ಟೋಬರ್‌ನಲ್ಲಿ ಮೃತಪಟ್ಟ ಪಕ್ಷದ ಆಧ್ಯಾತ್ಮಿಕ ನಾಯಕ ರ್ಯಾಬೈ ಒವಾಡಿಯ ಯೋಸೆಫ್‌ರಿಗಾಗಿ ಅಳುವಂತೆ ಅವರ ಸಲಹಾಕಾರರು ಸೂಚಿಸುವುದು ಕೇಳಿಸುತ್ತದೆ.

ಈ ವೀಡಿಯೊ ಇಸ್ರೇಲ್‌ನ ‘ಚಾನೆಲ್ 2 ನ್ಯೂಸ್’ನಲ್ಲಿ ಪ್ರಸಾರವಾಗಿದೆ. ವೀಡಿಯೊವನ್ನು ಸೋರಿಕೆ ಮಾಡಿದ್ದು ಗಾಯಕ ಬೆನ್ನಿ ಎಲ್ಬಾಝ್. ಅವರು ಸಚಿವ ಡೆರಿಯವರ ಮಾಜಿ ಸ್ನೇಹಿತ. ವೀಡಿಯೊದಲ್ಲಿ ಅವರೂ ಕಾಣಿಸಿಕೊಂಡಿದ್ದಾರೆ.

ಕಣ್ಣಿಗೆ ನೀರುಳ್ಳಿ ಉಜ್ಜುವ ಸಲಹೆಯನ್ನು ನೀಡಿದ್ದು ತಾನು ಎಂಬುದನ್ನು ಡೆರಿ ಅವರ ಸಲಹಾಕಾರ ಸೆಫಿ ಶಕೀದ್ ಒಪ್ಪಿಕೊಳ್ಳುತ್ತಾರೆ.

‘‘ಅವರು ಹಲವು ಗಂಟೆಗಳ ಕಾಲ ಅತ್ತರು’’ ಎಂದು ಶಕೀದ್ ನ್ಯೂಸ್ ಚಾನೆಲ್‌ಗೆ ತಿಳಿಸಿದರು.ಪಕ್ಷದ ನಾಯಕತ್ವವನ್ನು ಮರಳಿ ಪಡೆಯಲು ಡೆರಿ ಪ್ರಚಾರದಲ್ಲಿ ತೊಡಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News