ವಸತಿಯುತ ಮದ್ರಸಗಳ ಆಧುನೀಕರಣಕ್ಕೆ ಸರಕಾರಿ ಯೋಜನೆ ಜಾರಿ

Update: 2017-02-06 13:00 GMT

ಮಂಗಳೂರು, ಫೆ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ರಾಜ್ಯದ ವಸತಿಯುತ ಮದ್ರಸಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡುವ ಹೊಸ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದ್ದು, ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ಈ ಕುರಿತು ಸುತ್ತೋಲೆ ಹೊರಡಿಸಿ ಸರಕಾರಿ ಆದೇಶ ಅನುಷ್ಠಾನಗೊಳಿಸುವಂತೆ ಸೂಚಿಸಿದೆ.

ವಕ್ಪ್ ಇಲಾಖೆಯಲ್ಲಿ ನೋಂದಾಯಿತ ಮದ್ರಸಗಳಲ್ಲಿರುವ ಮಕ್ಕಳಿಗೆ ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣದೊಂದಿಗೆ ಸ್ಪೋಕನ್ ಇಂಗ್ಲಿಷ್ ಮತ್ತು ಒಕೇಷನಲ್ ಸ್ಕಿಲ್‌ಗಳಲ್ಲಿ ತರಬೇತಿ ನೀಡಲು, ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಹೊಸ ಯೋಜನೆಯಡಿ ಉದ್ದೇಶಿಸಲಾಗಿದೆ.

ಏನೇನು ಸೌಲಭ್ಯ?:

ಔಪಚಾರಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಕನ್ನಡ, ಇಂಗ್ಲಿಷ್, ಸಮಾಜಶಾಸ್ತ್ರ, ವಿಜ್ಞಾನ, ಗಣಿತ ವಿಷಯಗಳಲ್ಲಿ ಬೋಧಿಸಲು ನೇಮಿಸಲಾದ ಅಥವಾ ನೇಮಿಸಲು ಉದ್ದೇಶಿಸಲಾದ ಅರ್ಹ ಶಿಕ್ಷಕರಿಗೆ ಮಾಸಿಕ 6 ಸಾವಿರ ರೂ.ವನ್ನು 10 ತಿಂಗಳವರೆಗೆ ನೀಡಲಾಗುವುದು. ಧಾರ್ಮಿಕ ಶಿಕ್ಷಣ (ಹಿಫ್ಝ್ ಮತ್ತು ನಾಝಿರಾ) ಬೋಧಿಸುವ ಪ್ರತಿ ಅರ್ಹ ಶಿಕ್ಷಕರಿಗೆ ಮಾಸಿಕ 6 ಸಾವಿರ ರೂ.ವನ್ನು 10 ತಿಂಗಳ ಕಾಲ ನೀಡಲಾಗುವುದು.

25ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗಿರುವ ಪ್ರತೀ ಮದ್ರಸಗಳಿಗೆ 2 ಕಂಪ್ಯೂಟರ್, 1 ಯುಪಿಎಸ್, ಪ್ರಿಂಟರ್ ನೀಡಲಾಗುವುದು. 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗಿರುವ ಮದ್ರಸಗಳಿಗೆ 3 ಕಂಪ್ಯೂಟರ್, 1 ಯುಪಿಎಸ್, 1 ಪ್ರಿಂಟರ್ ನೀಡಲಾಗುವುದು. ಗ್ರಂಥಾಲಯ ಮತ್ತು ಪ್ರಯೋಗಾಲಯಗಳ ಸೌಲಭ್ಯವನ್ನು ಮತ್ತು ಕ್ರೀಡಾ ಸಾಮಗ್ರಿಗಳನ್ನು ಖರೀದಿಸಲು 1 ಲಕ್ಷ ರೂ. ಅನುದಾನವನ್ನು ನೀಡಲಾಗುವುದು. ಇವೆಲ್ಲವನ್ನು ಒಂದು ಬಾರಿಗೆ ಮಾತ್ರ ನೀಡಲಾಗುವುದು. ಈ ಮದ್ರಸಗಳ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 5 ಲಕ್ಷ ರೂ.ವನ್ನು ನೀಡಲು ಅವಕಾಶವಿದೆ. ಆಲಿಂ, ಫಾಝಿಲ್, ಹಾಫಿಝ್, ನಾಝಿರಾ ಮತ್ತು ಮೌಲವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ 6 ಸಾವಿರ ರೂ.ನೀಡಲಾಗುವುದು.

►ಯಾವ ಮದ್ರಸಗಳಿಗೆ ಅರ್ಹತೆ?:

ನೋಂದಾಯಿತ ಮದ್ರಸಗಳ ಆಡಳಿತ ಮಂಡಳಿಯು ಕನಿಷ್ಠ ತಮ್ಮ ಮದ್ರಸಗಳಲ್ಲಿ 25 ವಿದ್ಯಾರ್ಥಿಗಳನ್ನು ಹೊಂದಿರಬೇಕು ಮತ್ತು ಕುರಾನ್ ಶಿಕ್ಷಣ ನೀಡಲು ಹಾಫಿಝ್ 1, ನಾಝಿರಾ 1, ಬೋಧಕ ಸಿಬ್ಬಂದಿ ವರ್ಗವನ್ನು ಹೊಂದಿರಬೇಕು. ಮಕ್ಕಳಿಗೆ ಪ್ರತಿನಿತ್ಯ ಊಟೋಪಚಾರ ನೀಡಲು ಅಡುಗೆ ಸಿಬ್ಬಂದಿಯನ್ನು ಹೊಂದಿರಬೇಕು.

ಕೇಂದ್ರ ಸರಕಾರದ ಯೋಜನೆಗಳಾದ ಎಸ್‌ಪಿಕ್ಯುಇಎಂ, ಐಡಿಎಂಐ ಮತ್ತಿತರ ಯೋಜನೆಗಳ ಮೂಲಕ ಮದ್ರಸಗಳಿಗೆ ಅನುದಾನ ಪಡೆದವರು ಇದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ

ಹಾಗಾಗಿ ಅರ್ಹ ವಸತಿಯುತ ಮದ್ರಸಗಳ ಸಮಿತಿಯು ದ.ಕ.ಜಿಲ್ಲಾ ವಕ್ಫ್ ಕಚೇರಿ (0824-2420078)ಗೆ ಅರ್ಜಿ ಸಲ್ಲಿಸಬಹುದು ಎಂದು ವಕ್ಫ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News