×
Ad

ರೇಶನ್ ಕಾರ್ಡ್‌ಗೆ ಆಧಾರ್ ಲಿಂಕ್ ಕೊಡಲು ಒಂದು ವಾರ ಸಮಯಾವಕಾಶ ಬೇಕೇ: ಗ್ರಾಹಕರ ಪ್ರಶ್ನೆ

Update: 2017-02-06 19:12 IST

ಮಂಗಳೂರು, ಫೆ. 6: ರಾಜ್ಯ ಸರಕಾರವು ಪಡಿತರ ಚೀಟಿಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿರುವುದರಿಂದ ಎಪಿಎಲ್ ಪಡಿತರ ಚೀಟಿದಾರರು ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಆಹಾರ ಇಲಾಖೆಯ ಕಚೇರಿಗೆ ತೆರಳಿ ಆಧಾರ ಲಿಂಕ್‌ಗೆ ಸಂಬಂಧ ಪಟ್ಟ ಕಾಗದ ಪತ್ರಗಳನ್ನು ಸಲ್ಲಿಸಿದ್ದರೂ ಅಲ್ಲಿನ ಸಿಬ್ಬಂದಿಗಳು ಒಂದು ವಾರದ ಸಮಾವಕಾಶಗಳು ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಧಾರ್ ಲಿಂಕ್‌ಗಾಗಿ ಪಡಿತರ ಚೀಟಿಯ ಝೆರಾಕ್ಸ್ ಪ್ರತಿ ಸಹಿತ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳ ಝೆರಾಕ್ಸ್ ಪ್ರತಿಗಳನ್ನು ಇಲಾಖೆಗೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿರುವ ಸಿಬ್ಬಂದಿಗಳು ನಗರ ಮತ್ತು ನಗರದ ಹೊರವಲಯದ ವಾರ್ಡ್‌ಗಳ ಪಡಿತರ ಚೀಟಿದಾರರ ದಾಖಲೆಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸ್ವೀಕರಿಸುತ್ತಿದ್ದರೂ ಲಿಂಕ್ ನೀಡಲು ತೆಗೆದುಕೊಳ್ಳುತ್ತಿರುವ ಸಮಯಾವಕಾಶಕ್ಕೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಯಾವಾಗ ಕೊಡತ್ತೀರಿ ಎಂದು ಕೇಳಿದರೆ, ಒಂದು ವಾರ ಹೋಗುತ್ತದೆ ಎನ್ನುತ್ತಾರೆ. ನಮ್ಮ ರೇಶನ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ನಮ್ಮ ಮೊಬೈಲ್ ಫೋನ್‌ಗೆ ಎಸ್‌ಎಂಎಂಸ್ ಬರುತ್ತದೆಯೇ ಎಂದು ಕೇಳಿದರೆ ಎಸ್‌ಎಂಎಸ್ ಬರುವುದಿಲ್ಲ. ನೀವೇ ಹೊರಗಡೆ ಸೈಬರ್‌ನಲ್ಲಿ ನೋಡಬೇಕು ಎಂದು ಸಿಬ್ಬಂದಿ ಉತ್ತರಿಸುತ್ತಾರೆ ಎಂದು ಎಪಿಎಲ್ ಕಾರ್ಡ್‌ದಾರರೊಬ್ಬರು ಪತ್ರಿಕೆಯೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ.

ಪಡಿತರ ಚೀಟಿದಾರರು ತಮ್ಮ ಲಿಂಕ್ ನೀಡಲು ಕೆಲಸಗಳನ್ನು ಬಿಟ್ಟು ಇಲಾಖೆಯ ಮುಂದೆ ಸರದಿ ಸಾಲಲ್ಲಿ ನಿಲ್ಲಬೇಕು. ಲಿಂಕ್‌ಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಸಲ್ಲಿಸಿದ್ದರೂ ಮತ್ತೆ ಲಿಂಕ್ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಲು ಅಲೆದಾಟ ನಡೆಸಬೇಕು. ಇಲಾಖೆಯವರು ಗ್ರಾಹಕರಿಗೆ ಲಿಂಕ್ ಆಗಿರುವ ಬಗ್ಗೆ ಎಸ್‌ಎಂಎಸ್ ವ್ಯವಸ್ಥೆ ಕಲ್ಪಿಸಿದರೆ ಮತ್ತೆ ಅದಕ್ಕಾಗಿ ನಡೆಸುವ ಅಲೆದಾಟವನ್ನು ತಪ್ಪಿಸಬಹುದು. ಇತ್ತೀಚೆಗೆ ಬ್ಯಾಂಕ್‌ಗಳು ಕೂಡ ತಮ್ಮ ಪಾಸ್‌ಬುಕ್‌ಗಳಿಗೆ ಆಧಾರ್ ಲಿಂಕ್ ನೀಡುವ ಬಗ್ಗೆ ಹೇಳಿದ್ದವು. ಆದರೆ, ಅಲ್ಲಿ ನಮ್ಮ ಆಧಾರ್ ಸಲ್ಲಿಕೆಯಾದ ಕೆಲವೇ ನಿಮಿಷಗಳಲ್ಲಿ ಪಾಸ್‌ಬುಕ್‌ಗೆ ಆಧಾರ್ ಲಿಂಕ್ ಆಗಿರುವ ಬಗ್ಗೆ ಎಸ್‌ಎಂಎಸ್ ಮೂಲಕ ಮೊಬೈಲ್‌ಗೆ ಸಂದೇಶ ಬಂದು ನಮ್ಮ ಆಧಾರ್ ಲಿಂಕ್ ಬಗ್ಗೆ ಖಾತರಿಯಾಗಿದ್ದವು. ಅದೇ ವ್ಯವಸ್ಥೆಯನ್ನು ರೇಶನ್ ಕಾರ್ಡ್ ಲಿಂಕ್‌ಗೂ ಅನ್ವಯಿಸಿದರೆ, ಅದಕ್ಕಾಗಿ ಇನ್ನೊಮ್ಮೆ ನಡೆಸುವ ಅಲೆದಾಟವನ್ನು ತಪ್ಪಿಸಬಹುದು ಎಂದು ಪಡಿತರ ಚೀಟಿದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮಂಗಳೂರು ಒನ್ ಸುರತ್ಕಲ್ ಕೇಂದ್ರದಲ್ಲಿ ವ್ಯವಸ್ಥೆ ಇಲ್ಲ!

 ಎಪಿಎಲ್ ಮತು ಬಿಪಿಎಲ್ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ನಗರದ ಪಾಲಿಕೆಯ ಕಟ್ಟಡದಲ್ಲಿರುವ ಮಂಗಳೂರು ಒನ್ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಸುರತ್ಕಲ್‌ನ ಮಂಗಳೂರು ಒನ್ ಕೇಂದ್ರದಲ್ಲಿ ಈ ವ್ಯವಸ್ಥೆ ಯಾಕಿಲ್ಲ ಎಂದು ಸುರತ್ಕಲ್‌ನ ಸ್ಥಳೀಯರು ಪ್ರಶ್ನಿಸಿದ್ದಾರೆ. ರೇಶನ್ ಕಾರ್ಡ್ ಇದ್ದವರು ಮಂಗಳೂರು ಒನ್ ಕೇಂದ್ರಕ್ಕೆ ಹೋಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದು ತಿಳಿದು ಸುರತ್ಕಲ್ ಸುತ್ತಮುತ್ತಲಿನ ಜನರು ಮಂಗಳೂರು ಒನ್ ಸುರತ್ಕಲ್ ಕೇಂದ್ರಕ್ಕೆ ಭೇಟಿ ವಾಪಾಸಾಗುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯಲ್ಲಿ ವಿಚಾರಿಸಿದರೆ, ‘‘ಇಲ್ಲಿ ವ್ಯವಸ್ಥೆ ಇಲ್ಲ... ನೀವು ಡಿಸಿ ಆಫೀಸಿಗೆ ಹೋಗಿ’’ಎನ್ನುತ್ತಾರೆ ಎಂದು ರೇಶನ್ ಕಾರ್ಡ್‌ದಾರರೊಬ್ಬರು ಆರೋಪಿಸಿದ್ದಾರೆ.

ದೂರವಾಣಿ ಕರೆ ಸ್ವೀಕರಿಸಲ್ಪಡುತ್ತಿಲ್ಲ

ರೇಶನ್‌ಕಾರ್ಡ್, ಆಧಾರ್ ಕಾರ್ಡ್‌ಗಳ ಬಗ್ಗೆ ಕೇಳಲು ಸಾರ್ವಜನಿಕರು ಮಂಗಳೂರು ಒನ್ ಸುರತ್ಕಲ್ ಕೇಂದ್ರದ ದೂರವಾಣಿ ಸಂಖ್ಯೆ 2474599ಗೆ ಕರೆ ಮಾಡಿದರೆ, ಅದು ಸ್ವೀಕರಿಸಲಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯವರ ಗಮನ ಸೆಳೆದಾಗ ಅದು ಕಂಪ್ಯೂಟರ್‌ಗೆ ಸಂಪರ್ಕ ಕಲ್ಪಿಸಿದ್ದಾರೆ ಎಂದು ಹೇಳುತ್ತಾರೆ. ಕೆಲವು ತಿಂಗಳುಗಳಿಂದ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿದವರು, ರಿಂಗ್ ಆದರೂ ಸ್ವೀಕರಿಸಲಾಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಒಟ್ಟಾರೆ ಸುರತ್ಕಲ್ ಕ್ಷೇತ್ರದ ಸಾರ್ವಜನಿಕರು ಕೆಲವು ಅಗತ್ಯ ಮಾಹಿತಿಗಳಿಗಾಗಿ ಸುರತ್ಕಲ್‌ನ ಮಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿದರೆ ಸಾವರ್ಜನಿಕರ ಅಲೆದಾಟ ಮತ್ತು ಸಮಯ ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News