ನಾವು ಇನ್ನಷ್ಟು ದೂರ ಕ್ರಮಿಸಬೇಕಾಗಿದೆ: ಇ. ಅಬೂಬಕರ್
ಹೊಸದಿಲ್ಲಿ,ಫೆ.6: ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಷ್ಟ್ರೀಯ ಸಾರಥಿಗಳಾದ ಚೆಯರ್‌ಮ್ಯಾನ್ ಇ. ಅಬೂಬಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾರವರಿಗೆ ಪಾಪ್ಯುಲರ್ ಫ್ರಂಟ್ ದಿಲ್ಲಿ ರಾಜ್ಯ ಸಮಿತಿ ವತಿಯಿಂದ ಅಭಿನಂದನಾ ಸಮಾರಂಭವನ್ನು ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇ. ಅಬೂಬಕರ್, ನಾವು ನಮ್ಮ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ತಿರುವಿನ ಮೂಲಕ ಸಾಗುತ್ತಿದ್ದೇವೆ. ಜಗತ್ತಿನ ಅತಿದೊಡ್ಡ ಫ್ಯಾಶಿಸ್ಟ್ ಸಂಘಟನೆಯು ದೇಶದಲ್ಲಿ ತಾನು ಏಕಾಂಗಿ ಎಂಬಂತೆ ಆಡಳಿತ ನಡೆಸುತ್ತಿದೆ. ಮುಸ್ಲಿಮರು ಭಯಪೀಡಿತರಾಗಿದ್ದಾರೆ ಎಂದು ಹೇಳಿದರು.
ಕಳೆದ ದಶಕಗಳಲ್ಲಿ ಪಾಪ್ಯುಲರ್ ಫ್ರಂಟ್ ದೇಶದ ಉದ್ದಗಲಕ್ಕೂ ತಲುಪಿದೆ. ನಾವು ದೇಶದ ಹಳ್ಳಿಗಳ ಮೂಲಕ ಸಂಚರಿಸಿ ಜನರ ಆತಂಕ ಮತ್ತು ಸಮಸ್ಯೆಗಳನ್ನು ಅರಿತೆವು. ಇದು ಕೆಲವು ಐಶಾರಾಮಿ ಕೇಂದ್ರಗಳಲ್ಲಿ ಆರಾಮದಾಯಕವಾಗಿ ಕುಳಿತು ಸಂಘಟಿಸಿದ ಸಂಘಟನೆಯಲ್ಲ. ಬದಲಾಗಿ ಕೆಲವೊಂದು ತ್ರಾಸದಾಯಕ ಪ್ರಯಾಣದೊಂದಿಗೆ ಭಾರತದ ನಾಡಿಮಿಡಿತವನ್ನು ಅರಿಯುತ್ತಾ ಹಾಗೂ ದೇಶದ ಜನರೊಂದಿಗೆ ಸಂವಹನ ನಡೆಸಿ ಕಟ್ಟಿದ ಸಂಘಟನೆಯಾಗಿದೆ. ಇದೀಗ ನಮ್ಮ ಪ್ರಧಾನ ಕಚೇರಿಯು ರಾಷ್ಟ್ರ ರಾಜಧಾನಿಯಲ್ಲಿದೆ. ನಮ್ಮ ಕಾರ್ಯಚಟುವಟಿಕೆಗಳೆಲ್ಲವೂ ಈ ಕಚೇರಿಯಿಂದ ಹೊರಗಿದೆ ಎಂಬುದನ್ನು ನಾವು ಅರಿತಿದ್ದೇವೆ. ಈ ವರೆಗೆ ನಮ್ಮ ಸಂಘಟನಾ ರಚನೆಯು ಕೇವಲ 15 ರಾಜ್ಯಗಳಲ್ಲಿದೆ. ಆದಾಗ್ಯೂ ಇನ್ನಷ್ಟು ರಾಜ್ಯಗಳಲ್ಲಿಯೂ ನಮ್ಮ ಉಪಸ್ಥಿತಿ ಇದೆ. ಪಯಣವು ಇಲ್ಲಿಯ ವರೆಗೆ ತಲುಪಿದೆ. ನಾವು ಇನ್ನಷ್ಟು ದೂರ ಕ್ರಮಿಸಬೇಕಾಗಿದೆ ಎಂದು ಅಬೂಬಕರ್ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಹಮ್ಮದ್ ಅಲಿ ಜಿನ್ನಾ, ಇಸ್ಲಾಮಿನ ಪ್ರಕಾರ ನಾಯಕತ್ವ ಎನ್ನುವುದು ಒಂದು ಜವಾಬ್ದಾರಿಯೇ ಹೊರತು ಅದೊಂದು ಹುದ್ದೆಯಲ್ಲ. ಪಾಪ್ಯುಲರ್ ಫ್ರಂಟ್‌ನ ಓರ್ವ ಪ್ರಧಾನ ಕಾರ್ಯದರ್ಶಿಯಾಗಿ ತಾನು ಸಂಘಟನೆಯ ಪ್ರತಿಯೊಬ್ಬ ಸದಸ್ಯನಿಗೂ ಉತ್ತರಿಸಬೇಕಾಗುತ್ತದೆ. ಅದೇ ರೀತಿ ತಾನೋರ್ವ ಮುಸ್ಲಿಮನಾಗಿ ಭಾರತೀಯ ಮುಸ್ಲಿಮ್ ಸಮುದಾಯಕ್ಕೂ ಉತ್ತರದಾಯಿತ್ವವುಳ್ಳನಾಗಿದ್ದೇನೆ. ಓರ್ವ ಸಾರ್ವಜನಿಕ ನಾಯಕನಾಗಿ ದೇಶದ ಪ್ರತಿಯೊಬ್ಬ ಪ್ರಜೆಗೂ ಉತ್ತರಿಸಬೇಕಾಗಿದೆ. ಮನುಷ್ಯನೆಂಬ ನೆಲೆಯಲ್ಲಿ ಸರ್ವಶಕ್ತನಾದ ಅಲ್ಲಾಹನಿಗೆ ಉತ್ತರಿಸಬೇಕಾಗಿದೆ. ತಪ್ಪು ಕಂಡು ಬಂದಾಗ ನಮ್ಮನ್ನು ತಿದ್ದಬೇಕು. ಹಾಗೆಯೇ ನಮ್ಮ ಹೊಣೆಗಾರಿಕೆಯನ್ನು ಪೂರ್ಣಗೊಳಿಸಲು ಪ್ರಾರ್ಥಿಸಬೇಕು ಮತ್ತು ಉತ್ತಮ ಫಲಿತಾಂಶಕ್ಕಾಗಿ ಬೆಂಬಲವನ್ನು ನೀಡಬೇಕೆಂದು ಅವರು ಕೇಳಿಕೊಂಡರು. ಇದು ಭಾರತದ ನೈಜ ಶತ್ರುಗಳಾದ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಒಗ್ಗಟ್ಟಾಗುವ ಸಮಯವಾಗಿದೆ ಎಂದು ಮುಹಮ್ಮದ್ ಅಲಿ ಜಿನ್ನಾ ಹೇಳಿದರು.
ಇನ್‌ಸ್ಟಿಟ್ಯೂಟ್ ಆಫ್ ಆಬ್ಜೆಕ್ಟ್ ಸ್ಟಡೀಸ್‌ನ ಅಧ್ಯಕ್ಷ ಡಾ. ಮೆಹ್ಮೂದ್ ಮನ್ಝೂರ್ ಆಲಮ್, ಭಾರತೀಯ ಮುಸ್ಲಿಮ್ ರಾಜಕೀಯ ಸಮಿತಿಯ ಅಧ್ಯಕ್ಷ ಡಾ. ತಸ್ಲೀಮ್ ರಹ್ಮಾನಿ, ಜಾಮಿಯಾ ಮಿಲ್ಲಿಯಾಯದ ಪ್ರೊ. ಹಸೀನ ಆಸಿಯಾ, ಲೋಕ್‌ರಾಜ್ ಸಂಘಟನೆಯ ಅಧ್ಯಕ್ಷ ರಾಘವನ್ ಶ್ರೀನಿವಾಸನ್, ಲೇಖಕ ಜಾವೇದ್ ಜಮೀಲ್‌ರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಳಿಕ ಇವರು ನೂತನ ನಾಯಕರಿಗೆ ತಮ್ಮ ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು.
ರಾಷ್ಟ್ರೀಯ ಸಮಿತಿ ಸದಸ್ಯರಾದ ಇ.ಎಮ್.ಅಬ್ದುರ್ರಹ್ಮಾನ್, ಪ್ರೊ. ಪಿ.ಕೋಯ, ಅಡ್ವೊಕೇಟ್ ಮುಹಮ್ಮದ್ ಯೂಸುಫ್, ಎ.ಎಸ್. ಇಸ್ಮಾಯೀಲ್, ಅಬ್ದುಸ್ಸಮದ್, ಮೊಯ್ದೀನ್ ಕುಟ್ಟಿ ಫೈಝಿ, ಗುಲ್‌ಪಾಮ್ ಹುಸೇನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಸೀಬುಲ್ಲಾ ಉಮರಿಯವರ ಕುರ್‌ಆನ್ ಪಾರಾಯಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಫೀಖುರ್ರಹ್ಮಾನ್ ಸ್ವಾಗತಿಸಿದರು. ಪಾಪ್ಯುಲರ್ ಫ್ರಂಟ್ ದಿಲ್ಲಿ ರಾಜ್ಯಾಧ್ಯಕ್ಷ ಪರ್ವೇಝ್ ಅಹ್ಮದ್ ಪರಿಚಯಿಸಿದರು. ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಮುಹಮ್ಮದ್ ಆರೀಫ್ ಅಹ್ಮದ್ ವಂದಿಸಿದರು.