ಭಾರತದಲ್ಲಿ ಮುಸ್ಲಿಮರ ಬದುಕು ದಲಿತರಿಗಿಂತ ಕೀಳು: ಶಾಫಿ ಬೆಳ್ಳಾರೆ
ಉಡುಪಿ, ಫೆ.6: ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಭಾರತದ ಮುಸ್ಲಿಮರು ದಲಿತರಿಗಿಂತಲೂ ತಳ ಮಟ್ಟದಲ್ಲಿ ಬದುಕುತ್ತಿದ್ದಾರೆ. ಅನೈತಿಕ ದಂಧೆ, ಗಾಂಜಾ ಸೇವನೆಯಂತಹ ಸಮಾಜ ಕಂಟಕ ಕಾರ್ಯಗಳಲ್ಲಿ ಕೆಲವು ಮುಸ್ಲಿಂ ಯುವಕರು ಭಾಗಿಯಾಗುತ್ತಿದ್ದು, ಇದು ಸಮುದಾಯ ಅವನತಿಯತ್ತ ಸಾಗು ತ್ತಿರುವ ಬಗ್ಗೆ ಆತಂಕವನ್ನು ಸೃಷ್ಟಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದ್ದಾರೆ.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ಉಡುಪಿ ಜಿಲ್ಲೆಯ ಹೂಡೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಇಸ್ಲಾಮಿನ ಬುನಾದಿಯನ್ನು ಬುಡಮೇಲು ಮಾಡುವ ಷಡ್ಯಂತ್ರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಯತ್ನದ ಮೂಲಕ ವ್ಯವಸ್ಥಿತ ವಾಗಿ ನಡೆಯುತ್ತಿದೆ. ಇವರ ಶತ್ರು ಯಾವುದೇ ಸಂಘಟನೆಗಳಲ್ಲ, ಯಾವುದೇ ಗುಂಪು, ಪಂಗಡಗಳಲ್ಲ. ಬದಲಾಗಿ ಇಸ್ಲಾಂ ನಾಶವೇ ಇವರ ಮುಖ್ಯ ಗುರಿ ಯಾಗಿದೆ. ಈ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.
ಮೌಲಾನ ಮುಅಝ್ಝಮ್ ಖಾಸಿಮಿ ಮಾತನಾಡಿ, ಸಿನೆಮಾ ನಟರನ್ನು ರೋಲ್ ಮಾಡೆಲ್ಗಳನ್ನಾಗಿ ನಮ್ಮ ಯುವ ಸಮೂಹವು ಕಾಣುತ್ತಿರುವುದು ವಿಷಾದನೀಯ. ಓರ್ವ ಮುಸ್ಲಿಂ ಮಹಿಳೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೈತಿಕ ಕಾರ್ಯದತ್ತ ಹೆಜ್ಜೆ ಹಾಕಿದಲ್ಲಿ, ಆ ಊರಿನ ಪ್ರತಿ ಶ್ರೀಮಂತನು ಈ ಬಗ್ಗೆ ಅಲ್ಲಾಹನಿಗೆ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.
ನಮ್ಮ ಮಗು ಶಾಲೆಯಿಂದ ಬರುವಾಗ ಒಂದು ಗಂಟೆ ತಡವಾದರೆ ಆಕಾಶವೇ ಕಳಚಿ ಬಿದ್ದಂತೆ ವರ್ತಿಸುತ್ತೇವೆ. ಅಂತಹದರಲ್ಲಿ ಯಾವುದೇ ತಪ್ಪು ಮಾಡದೆ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿರುವ ಯುವಕರ ಮನೆ ಯವರ ಪರಿಸ್ಥಿತಿ ಹೇಗಿರಬಹುದು ಎಂಬುದು ನಾವು ಚಿಂತಿಸಬೇಕಿದೆ ಎಂದು ಅವರು ತಿಳಿಸಿದರು. ತೌಖೀರ್ ಅಹ್ಮದ್ ಖಾಸಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೌಲಾನ ಅಸ್ಗರ್ ಅಲಿ ಖಾಸಿಮಿ, ಫಯಾಝ್ ಅಹ್ಮದ್ ಮಲ್ಪೆ, ಅಬ್ದುರ್ರಶೀದ್ ಉಪಸ್ಥಿತರಿದ್ದರು. ಮೌಲಾನ ಜಾವೆದ್ ಖಾಸಿಮಿ ಕಾರ್ಯಕ್ರಮ ನಿರೂಪಿಸಿದರು.