ಬೆಂಕಿ ಆಕಸ್ಮಿಕ: ಮಹಿಳೆ ಮೃತ್ಯು
ಹಿರಿಯಡ್ಕ, ಫೆ.6: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಹಿರಿಯಡ್ಕದ ಜೋಡುಕಟ್ಟೆ ಎಂಬಲ್ಲಿ ಫೆ.5ರಂದು ನಡೆದಿದೆ.
ಮೃತರನ್ನು ಶಿವಮೊಗ್ಗ ಸೊರಬ ತಾಲೂಕಿನ ಎಣ್ಣೆಕೊಪ್ಪ ನಿವಾಸಿ ಎಂ. ಯಲ್ಲಪ್ಪಎಂಬವರ ಮಗಳು ಮಮತಾ ಯಾನೆ ಚೈತನ್ಯಾ(23) ಎಂದು ಗುರುತಿಸಲಾಗಿದೆ. ಪತಿ ಜಯರಾಮ ಎಂಬವರೊಂದಿಗೆ ಹಿರಿಯಡ್ಕದ ಜೋಡುಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಮಮತಾ ಸಂಜೆ 6ಗಂಟೆಗೆ ಅಡುಗೆ ಮಾಡಲು ಕೋಣೆಯಲ್ಲಿ ಸೀಮೆಎಣ್ಣೆಯ ಪಂಪ್ ಸ್ಟವ್ ಹೊತ್ತಿಸುವಾಗ ಆಕಸ್ಮಿಕವಾಗಿ ಬೆಂಕಿ ಅವರು ಉಟ್ಟ ಬಟ್ಟೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಬೆಂಕಿ ನಂದಿಸಲು ಹೋದ ಪತಿ ಜಯರಾಮ್ ಕೂಡ ಗಾಯ ಗೊಂಡಿದ್ದರು. ಮಮತಾರನ್ನು ಕೂಡಲೇ ಮಣಿಪಾಲ ಆಸ್ಪತ್ರೆ ದಾಖಲಿಸಲಾ ಯಿತು. ಆದರೆ ರಾತ್ರಿ 11:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿರುವ ಜಯರಾಮ್ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.