5ನೇ ಪರ್ಯಾಯದಲ್ಲಿ 35ನೇ ಸುಧಾಮಂಗಲ!
ಉಡುಪಿ, ಫೆ.6: ಉಡುಪಿ ಅಷ್ಟಮಠಗಳ ಇತಿಹಾಸದಲ್ಲಿ ಐದನೇ ಬಾರಿಗೆ ದ್ವೈವಾರ್ಷಿಕ ಕೃಷ್ಣ ಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಿ ಈಗಾಗಲೇ ದಾಖಲೆ ಬರೆದಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸೋಮವಾರ ತಮ್ಮ 35ನೇ ಶ್ರೀಮನ್ನ್ಯಾಯ ಸುಧಾ ಮಂಗಲೋತ್ಸವವನ್ನು ಸಂಪನ್ನಗೊಳಿಸಿ ಮತ್ತೊಂದು ದಾಖಲೆ ನಿರ್ಮಿಸಿದರು.
ಸೋಮವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಹೂವಿನಿಂದ ಸಿಂಗಾರಗೊಂಡ ವೇದಿಕೆಯ ನಡುವೆ ರಜತಮಂಟಪ ಮಧ್ಯದಲ್ಲಿ ಸ್ವರ್ಣಪಲ್ಲಕ್ಕಿಯಲ್ಲಿ ಹೊತ್ತು ತಂದ ಶ್ರೀಮನ್ನ್ಯಾಯ ಸುಧಾಗ್ರಂಥ ಮತ್ತು ಶ್ರೀವೇದವ್ಯಾಸರ ಸಾಲಿಗ್ರಾಮ ಮತ್ತು ವಿಗ್ರಹವನ್ನು ಸ್ಥಾಪಿಸಿದ ಕಾರ್ಯಕ್ರಮ ನಡೆಯಿತು.
ಬನ್ನಂಜೆ ರಾಘವೇಂದ್ರ ತೀರ್ಥರು, ಸೋದೆಮಠದ ಶ್ರೀವಿಶ್ವವಲ್ಲಭ ತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಬೆಂಗಳೂರಿನ ವಿಶ್ವಭೂಷಣ ತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯೇಶ ತೀರ್ಥರು, ಕೃಷ್ಣಾ ಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನತೀರ್ಥರು ಉಪನ್ಯಾಸ ನೀಡಿ ಶ್ರೀಮಧ್ವಾಚಾರ್ಯರ ಅನುವ್ಯಾಖ್ಯಾನ ಗ್ರಂಥಕ್ಕೆ ಶ್ರೀ ಜಯತೀರ್ಥರು ನ್ಯಾಯಸುಧಾ ವ್ಯಾಖ್ಯಾನ ಬರೆದು ಭಗವಂತನ ಅಸ್ತಿತ್ವದ ವಿಚಾರಗಳಲ್ಲಿ ಭಕ್ತರಿಗೆ ಬರಬಹುದಾದ ಸಂದೇಹಗಳನ್ನು ಅತ್ಯಂತ ಸರಳವಾಗಿ ಪರಿಹರಿಸಿದ್ದಾರೆ ಎಂದರು.
ಪೇಜಾವರ ಶ್ರೀಗಳು ಅದನ್ನು ನಿರಂತರ ಪಾಠ, ಪ್ರವಚನಗಳ ಮೂಲಕ ನೂರಾರು ವಿದ್ವಾಂಸರನ್ನು ಸಮಾಜಕ್ಕೆ ಧಾರೆಯೆರೆದಿದ್ದಾರೆ. ಪೇಜಾವರ ಶ್ರೀಗಳು ಜ್ಞಾನಗಂಗೆಯನ್ನು ಹರಿಸುತ್ತಿರುವ ಭಗೀರಥ, ಅವರೊಬ್ಬ ಸುಧಾರಕರೂ ಆಗಿದ್ದಾರೆಂದು ಬಣ್ಣಿಸಿದರು.
ನಂತರ ಪರ್ಯಾಯ ಪೇಜಾವರ ಶ್ರೀಗಳು ಮಂಗಲ ವ್ಯಾಖ್ಯಾನ ಮಂಡಿಸಿ ದರು. ಬಳಿಕ ಶ್ರೀ ಮನ್ನ್ಯಾಯ ಸುಧಾಗ್ರಂಥಕ್ಕೆ ಮಹಾಮಂಗಲಾರತಿ ಬೆಳಗಿ ಈ ಬಾರಿ ಸುಧಾಧ್ಯಯನ ಮುಗಿಸಿದ 20ವಿದ್ಯಾರ್ಥಿಗಳನ್ನು ಸಂಮಾನಿಸಿದರು. ಇದೇ ವೇಳೆ ಮಂತ್ರಾಲಯ ಕ್ಷೇತ್ರದ ವತಿಯಿಂದ ಪೇಜಾವರ ಶ್ರೀಗಳಿಗೆ ಮುತ್ತು, ರತ್ನ ಹಾಗೂ ನಾಣ್ಯಗಳಿಂದ ಅಭಿಷೇಕ ಮಾಡಿ ಶ್ರೀಸುಬುಧೇಂದ್ರ ತೀರ್ಥರು ಗೌರವಿಸಿದರು.
ಸುಧಾಧ್ಯಯನದಲ್ಲಿ ಹಿರಿಯ ಶ್ರೀಗಳಿಗೆ ಸಾಥ್ ನೀಡಿದ ಕಿರಿಯ ಶ್ರೀಗಳನ್ನೂ ಮಂತ್ರಾಲಯದ ವಿದ್ವಾನ್ ರಾಜಾ ಎಸ್ ಗಿರಿ ಆಚಾರ್ಯರು ಗೌರವಿಸಿದರು. ಪರ್ಯಾಯ ಮಠದ ವತಿಯಿಂದ ಎಲ್ಲ ಶ್ರೀಪಾದರುಗಳನ್ನು ದಿವಾನರಾದ ಎಂ ರಘುರಾಮಾಚಾರ್ಯ ಗೌರವಿಸಿದರು.
ಶ್ರೀವಿಶ್ವಗುರುಪ್ರಿಯ ತೀರ್ಥರು, ವಿದ್ವಾಂಸ ಸಗ್ರಿರಾಘವೇಂದ್ರ ಉಪಾಧ್ಯಾಯ, ಹರಿದಾಸ ಉಪಾಧ್ಯಾಯ, ಆನಂದತೀರ್ಥ ನಾಗಸಂಪಿಗೆ, ಎ.ಹರಿದಾಸ ಭಟ್, ಡಿ.ಪ್ರಹ್ಲಾದಾಚಾರ್ಯ, ಸತ್ಯನಾರಾಯಣಾಚಾರ್ಯ ಹಾಗೂ ಕೃಷ್ಣ ಮಠದ ಆಸ್ಥಾನ ವಿದ್ವಾಂಸರು ಉಪಸ್ಥಿತರಿದ್ದರು.