×
Ad

20 ಸಾವಿರ ಕೋ.ರೂ. ಶಸ್ತ್ರಾಸ್ತ್ರ ಖರೀದಿಸಿದ ಕೇಂದ್ರ

Update: 2017-02-06 23:52 IST

ಹೊಸದಿಲ್ಲಿ, ಫೆ.6: ಸೇನೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇಡುವ ಸಲುವಾಗಿ ಹಾಗೂ ಯಾವುದೇ ಕ್ಷಣದಲ್ಲಿ ಯದ್ಧಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 20 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಶಸ್ತ್ರಾಸ್ತ್ರ ಖರೀದಿ ಮಾಡಲು ಕಳೆದ ಮೂರು ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದೆ.

ಸೆಪ್ಟಂಬರ್ 18ರ ಉರಿ ದಾಳಿಯ ಬಳಿಕ ಈ ದಿಢೀರ್ ನಿರ್ಧಾರ ಕೈಗೊಂಡಿದ್ದು, ಸೇನೆಗೆ ತುರ್ತು ಸಂದರ್ಭದಲ್ಲಿ ಅಗತ್ಯವಾದ ಶಸ್ತ್ರಾಸ್ತ್ರ ಮತ್ತು ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಈ ಭಾರೀ ಮೊತ್ತದ ಶಸ್ತ್ರಾಸ್ತ್ರ ಖರೀದಿಸಿದೆ.

ಸೆಪ್ಟಂಬರ್ 29ರಂದು ಗಡಿ ನಿಯಂತ್ರಣ ರೇಖೆಯಾಚೆ, ಪಾಕ್ ಆಕ್ರ ಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ಭಾರತೀಯ ಸೇನಾ ಪಡೆಯನ್ನು ಸಬಲಗೊಳಿಸುವ ಸಲುವಾಗಿ ಹೊಸದಾಗಿ ಖರೀದಿ ಮಾಡಲಾಗಿದೆ. ಉರಿ ದಾಳಿಯ ಬಳಿಕ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಉಪ ಮುಖ್ಯಸ್ಥರಿಗೆ ಹಣಕಾಸು ಅಧಿಕಾರವನ್ನು ನೀಡಿ ತುರ್ತು ಅಗತ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ ನೀಡಲಾಗಿತ್ತು.

ಪ್ರಸ್ತುತ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರದ ಹಿಂದಿನ ಬೇಡಿಕೆಗಳನ್ನು ಪೂರೈಸಲು ಕೇವಲ 86,488 ಕೋಟಿ ರೂಪಾಯಿಗಳನ್ನು ನೀಡಿದ್ದರೂ, ಸೇನೆಯನ್ನು ಸಬಲಗೊಳಿಸುವ ಸಲುವಾಗಿ ಈ ತುರ್ತು ಖರೀದಿಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ 10 ದಿನಗಳ ಕಾಲ ನಿರಂತರವಾಗಿ ಯಾವುದೇ ಶಸ್ತ್ರಾಸ್ತ್ರ ಅಥವಾ ಇತರ ಪೂರಕ ಸೌಲಭ್ಯಗಳ ಕೊರತೆ ಇಲ್ಲದೇ, ಯುದ್ಧ ಮುಂದುವರಿಸಲು ಭಾರತೀಯ ಪಡೆಗಳಿಗೆ ಸಾಧ್ಯವಾಗಲಿದೆ.
ಮುಖ್ಯವಾಗಿ ರಷ್ಯಾ, ಇಸ್ರೇಲ್ ಹಾಗೂ ಫ್ರಾನ್ಸ್‌ನಿಂದ ಇವುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತೀಯ ವಾಯು ಪಡೆ ಒಟ್ಟು 9,200 ಕೋಟಿ ರೂಪಾಯಿ ವೌಲ್ಯದ 43 ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಲ್ಲಿ ಸುಕೋಯ್- 30ಎಂಕೆಐ, ಮೀರಜ್-2000 ಹಾಗೂ ಎಂಐಜಿ-29 ಯುದ್ಧವಿಮಾನಗಳು, ಸಾಗಣೆ ವಿಮಾನಗಳಾದ ಐಎಲ್-76, ಮಿಡ್ ಏರ್ ರಿಫಿಲ್ಲರ್ ಐಎಲ್-78 ಸೇರಿದೆ.
ಭಾರತೀಯ ಭೂಸೇನೆ 5,800 ಕೋಟಿ ರೂಪಾಯಿ ವೌಲ್ಯದ 10 ಒಪ್ಪಂದಗಳನ್ನು ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News