×
Ad

ಜಯಲಲಿತಾ ಸಾವು ಸಹಜವಲ್ಲ, ಅದೊಂದು ಹತ್ಯೆ: ಪಿ.ಎಚ್.ಪಾಂಡಿಯನ್

Update: 2017-02-07 12:55 IST

 ಚೆನ್ನೈ,ಫೆ.7: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಸಾವು ಸಹಜವಲ್ಲ. ಅದೊಂದು ಹತ್ಯೆ ಎಂದು ಎಐಎಡಿಎಂಕೆ ಮಾಜಿ ನಾಯಕ ಬಿ.ಎಚ್. ಪಾಂಡಿಯನ್‌ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಾಂಡಿಯನ್ " ಜಯಲಲಿತಾ ಅವರನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ವಿ.ಕೆ. ಶಶಿಕಲಾ ಕೈವಾಡ ಇದೆ. ಪೊಲೀಸರು ಜಯಲಲಿತಾ ಸಾವಿನ ಪ್ರಕರಣವನ್ನು  ತನಿಖೆಗೆ ಕೈಗೆತ್ತಿಕೊಂಡು ವಿ.ಕೆ,ಶಶಿಕಲಾರನ್ನು ತನಿಖೆಗೊಳಪಡಿಸುವಂತೆ ಆಗ್ರಹಿಸಿದ್ದಾರೆ.

ಜಯಲಲಿತಾ ಅವರನ್ನು ಮನೆಯಲ್ಲಿ ದೂಡಿಹಾಕಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಯಸ್‌ ಗಾರ್ಡನ್ ಮನೆಯಲ್ಲಿ ಜಯಲಲಿತಾ ಅವರ ಜೊತೆ ಜಗಳವಾಡಿದ  ವ್ಯಕ್ತಿಯೊಬ್ಬರು ಜಯಲಲಿತಾ ಅವರನ್ನು ಜೋರಾಗಿ ದೂಡಿದ್ದರು. ಇದರಿಂದ ಜಯಲಲಿತಾ ಅವರು ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.

ಜಯಲಲಿತಾ ಸಾವಿಗೆ ಶಶಿಕಲಾ ನೇರ  ಹೊಣೆಯಾಗಿದ್ದಾರೆ. ಜಯಲಲಿತಾ ಅವರಿಗೆ ಅಪೋಲೊ ಆಸ್ಪತ್ರೆಯಲ್ಲಿ ನೀಡಲಾಗಿರುವ ಚಿಕಿತ್ಸೆಯ ವಿವರವನ್ನು ಗೌಪ್ಯವಾಗಿರಿಸಲಾಗಿತ್ತು. ಎಲ್ಲವೂ ಶಶಿಕಲಾ ನಿರ್ದೇಶನದಂತೆ ನಡೆದಿದೆ ಎಂದು ಪಾಂಡಿಯನ್ ಆರೋಪಿಸಿದ್ದಾರೆ.

ಜಯಲಲಿತಾ ಮತ್ತು ಶಶಿಕಲಾ ಅವರಿಗೆ ಯಾವುದೇ ಸಂಬಂಧವಿಲ್ಲ. ಶಶಿಕಲಾ ಅವರನ್ನು ಜಯಲಲಿತಾ ಮನೆಯಿಂದ ಹೊರಕ್ಕೆ ಹಾಕಿದ್ದರು. ಜಯಲಲಿತಾ ಸಾವಿನ ಬಳಿಕ ಪೋಯಸ್‌ ಗಾರ್ಡನ್ ನ್ನು ವಶಪಡಿಸಿಕೊಂಡ ಶಶಿಕಲಾ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದರು. ಇದೀಗ ಮುಖ್ಯ ಮಂತ್ರಿಯಾಗಿ ನಿಯೋಜನೆಗೊಂಡಿದ್ಧಾರೆ.

ಶಶಿಕಲಾ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಮಂತ್ರಿಯಾಗುವ ಯಾವುದೇ ಅರ್ಹತೆ ಇಲ್ಲ. ಅವರು ಕೈಗೊಂಡ ನಿರ್ಧಾರಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಜಯಲಲಿತಾ ಅವರು ಶಶಿಕಲಾ ಅವರಿಗೆ ತನ್ನ ಜೀವಿತಾವಧಿಯಲ್ಲಿ ಯಾವುದೇ ಅಧಿಕಾರ ನೀಡಲಿಲ್ಲ. ಈಗ ಎಲ್ಲ ಅಧಿಕಾರವನ್ನು ನಿಯಮಬಾಹಿರವಾಗಿ ಪಡೆದಿದ್ದಾರೆ ಎಂದು ಜಯಲಲಿತಾರ ಮಾಜಿ ಕಾನೂನು ಸಲಹೆಗಾರ ಪಾಂಡಿಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News