×
Ad

ಗಾಯಾಳುಗಳನ್ನು ರಸ್ತೆಯಲ್ಲೇ ಬಿಟ್ಟು ಹೋದ ಪೊಲೀಸರು!

Update: 2017-02-07 13:01 IST

ಮಂಗಳೂರು, ಫೆ.7: ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬವೊಂದರ ಮೇಲೆ ತಂಡವೊಂದು ಮಾರಕಾಯುಧದಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ಬೆಂಗರೆಯಲ್ಲಿ ನಡೆದಿದೆ.

ಮೂಲತ: ಸುಳ್ಯ ಜಾಲ್ಸೂರಿನ ಪ್ರಸ್ತುತ ಬೆಂಗರೆಯಲ್ಲಿ ವಾಸವಾಗಿರುವ ಮಹ್ಮೂದ್ ಮತ್ತು ಅವರ ಪತ್ನಿ ಫಮೀನಾ, ಪುತ್ರ ಸಲ್ಮಾನ್ ಫಾರಿಸ್, ಪುತ್ರಿ ಶಮ್ಲಾನಾ ಹಲ್ಲೆಗೊಳಗಾದವರು. ಇವರಿಗೆ ಫಮೀನಾರ ಅಕ್ಕ ಮುಮ್ತಾಝ್, ಆಕೆಯ ಪತಿ ಅನ್ವರ್ ಹುಸೈನ್, ಪುತ್ರಿ ಶಮೀಮಾ, ಪುತ್ರ ಶಮೀರ್ ಹಾಗು ಅನ್ವರ್ ಹುಸೈನ್‌ರ ಪರಿಚಯದ ಕಣ್ಣೂರಿನ ಹಂಝ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಫಮೀನಾ ನೀಡಿದ ದೂರಿನಂತೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ ಹಲ್ಲೆಗೊಳಗಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡುತ್ತಿದ್ದ ಪೊಲೀಸರು ಯಾರದೋ ಸೂಚನೆ ಮೇರೆಗೆ ದಾರಿಮಧ್ಯೆ ಗಾಯಾಳುಗಳನ್ನು ಇಳಿಸಿದ ಆರೋಪ ಕೇಳಿ ಬಂದಿದೆ. ಇದರಿಂದ ಸುಮಾರು ಅರ್ಧ ಗಂಟೆ ರಸ್ತೆ ತಡೆಯುಂಟಾಗಿದೆ.

*ಘಟನೆಯ ವಿವರ: 8 ವರ್ಷದ ಹಿಂದೆಯೇ ಅಕ್ಕ ಮುಮ್ತಾಝ್‌ರ ಮನೆಯ ಪಕ್ಕದಲ್ಲೇ ನಾವು ಸಣ್ಣ ಮನೆಕಟ್ಟಿಕೊಂಡು ವಾಸಮಾಡುತ್ತಿದ್ದೆವು. ಪತಿ ವಿದೇಶಕ್ಕೆ ತೆರಳಿದ ಬಳಿಕ ಆರ್‌ಸಿಸಿ ಮನೆ ಕಟ್ಟಲಾಗಿತ್ತು. ಇತ್ತೀಚೆಗೆ ಮುಮ್ತಾಝ್ ಮತ್ತವರ ಗಂಡ ಅನ್ವರ್ ಹುಸೈನ್ ಮನೆ ತೊರೆಯುವಂತೆ ಒತ್ತಾಯಿಸತೊಡಗಿದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದೆವಲ್ಲದೆ, ಹಿರಿಯ ಹಾಗು ಮಸೀದಿಯ ಮುಖಂಡರ ಸಮ್ಮುಖ ರಾಜೀ ಮಾತುಕತೆ ನಡೆಸಲಾಗಿತ್ತು. ಆದರೆ ಯಾವುದೂ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಕಳೆದ ಮಂಗಳವಾರ ನನ್ನ ಪುತ್ರ ಸಲ್ಮಾನ್‌ಗೆ ಅಕ್ಕನ ಮಗ ಶಮೀರ್ ಹಲ್ಲೆ ನಡೆಸಿದ್ದ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆತನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಶನಿವಾರ ಮಗ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿದ್ದು, ಬಳಿಕ ಜಾಲ್ಸೂರ್‌ಗೆ ಹೋಗಿದ್ದ ನಾವು ಇಂದು ಬೆಳಗ್ಗೆ ಸುಮಾರು 8:50ಕ್ಕೆ ಬೆಂಗರೆಗೆ ಬಂದೆವು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಅನ್ವರ್ ಹುಸೈನ್ ಮತ್ತಿತರರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿ ಕತ್ತಿ, ಚಾಕು, ರಾಡ್, ದೊಣ್ಣೆಯಿಂದ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದರಲ್ಲದೆ ಬಿಡಿಸಲು ಹೋದ ನನಗೆ ಮತ್ತು ಮಗ, ಮಗಳಿಗೂ ಹಲ್ಲೆ ನಡೆಸಿದರು. ಮನೆಯ ಸಾಮಗ್ರಿಗಳಿಗೆ ಹಾನಿಗೈದರು.

ಈ ಮಧ್ಯೆ ಡಿವೈಎಫ್‌ಐ ಸಂಘಟನೆಯ ಮುಖಂಡರು ನೆರವಿಗೆ ಬಂದರಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೂ ಕೂಳೂರು ಸೇತುವೆ ಬಳಿ ನಮ್ಮನ್ನು ಪೊಲೀಸ್ ವಾಹನದಿಂದ ಇಳಿಸಿ ‘ನಮಗೆ ತುರ್ತು ಕೆಲಸ ಇದೆ. ನೀವು ರಿಕ್ಷಾದಲ್ಲಿ ಹೋಗಿ’ ಎನ್ನುತ್ತಾ ಅಮಾನವೀಯತೆ ಪ್ರದರ್ಶಿಸಿದರು. ಆದರೆ, ನಮ್ಮ ಸ್ಥಿತಿ ನೋಡಿ ಯಾವ ರಿಕ್ಷಾದವರೂ ಕರೆದುಕೊಂಡು ಹೋಗಲು ತಯಾರಿರಲಿಲ್ಲ. ಅಷ್ಟರಲ್ಲಿ ಅಲ್ಲಿ ಸೇರಿದ ಜನರು ವಿಷಯ ತಿಳಿದು ರಸ್ತೆಬದಿಯಲ್ಲಿದ್ದ ನಮ್ಮನ್ನು ರಸ್ತೆಯ ಮಧ್ಯೆ ಕೂರಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ನಮ್ಮನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ದುಬಾರಿ ಬಿಲ್ ಆಗುತ್ತಿರುವ ಕಾರಣ ಗಂಡನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಮತ್ತು ಮಕ್ಕಳು ಪ್ರಾಥಮಿಕ ಚಿಕಿತ್ಸೆ ಪಡೆಕೊಂಡೆವು ಎಂದು ಫಮೀನಾ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ಫಮೀನಾರ ಆರೋಪವನ್ನು ಹಲ್ಲೆಗಳೆದಿದ್ದಾರೆ. ನಾವು ಗಾಯಾಳುಗಳನ್ನು ದಾರಿಮಧ್ಯೆ ಇಳಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

*ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲಿ

ಗಾಯಾಳುಗಳನ್ನು ಸಾಗಾಟ ಮಾಡುತ್ತಿದ್ದ ಎಎಸ್‌ಐಗೆ ಹಿರಿಯ ಅಧಿಕಾರಿಯೊಬ್ಬರು ಒತ್ತಡ ಹಾಕಿ ಕೂಳೂರು ಸೇತುವೆ ಬಳಿ ಇಳಿಸುವಂತೆ ಮಾಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಪೊಲೀಸರೇ ಇಲಾಖೆಯ ವಾಹನದಿಂದ ಇಳಿಸಿರುವುದು ಗಂಭೀರ ವಿಷಯವಾಗಿದೆ. ಅಲ್ಲದೆ ಇದು ಮಂಗಳೂರಿಗೆ ಶೋಭೆ ತರುವಂತಹ ಬೆಳವಣಿಗೆಯಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ ಎಂದು ಡಿವೈಎಫ್‌ಐ ಮುಖಂಡ ಬಿ.ಕೆ.ಇಮ್ತಿಯಾಝ್ ಒತ್ತಾಯಸಿದ್ದಾರೆ.

 ಹಲ್ಲೆಗೊಳಗಾದ ಕುಟುಂಬಕ್ಕೆ ನೆರವು ನೀಡಿದ ತಪ್ಪಿಗೆ ಕೇಸು

ಬೆಂಗರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರ ಅಮಾನವೀಯ ವರ್ತನೆಯನ್ನು ಖಂಡಿಸಿ ಕೂಳೂರು ಹೆದ್ದಾರಿಯಲ್ಲಿ ಜಮಾಯಿಸಿ ಸಂಚಾರ ಬಂದ್ ಮಾಡಿ, ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿ ಹಲವರ ವಿರುದ್ಧ ಕಾವೂರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಾರ್ಪೋರೇಟರ್ ದಯಾನಂದ, ಡಿವೈಎಫ್‌ಐ ಮುಖಂಡರಾದ ನೌಷಾದ್ ಬೆಂಗ್ರೆ, ಅಸ್ಲ್ಲಂ ಬೆಂಗ್ರೆ, ಹನ್ೀ ಯಾನೆ ಹಂಪು, ಜಲೀಲ್ ಬೆಂಗ್ರೆ, ಫೈಝಲ್, ಇಮ್ತಿಯಾಝ್, ಅನೀಸ್ ಹಾಗೂ ಇತರ 10-15 ಮಂದಿ ಸೇರಿ ಕೂಳೂರು ಬಳಿ ರಾ.ಹೆದ್ದಾರಿ 66ನ್ನು ಬಂದ್ ಮಾಡಿ ಪೂ.11:10ರಿಂದ 11:25ರವರೆಗೆ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.

ಒಟ್ಟಿನಲ್ಲಿ ಹಲ್ಲೆಗೊಳಗಾದ ಕುಟುಂಬಕ್ಕೆ ನೆರವು ನೀಡಿದ್ದಕ್ಕೆ ಡಿವೈಎಫ್‌ಐ ಮುಖಂಡರ ವಿರುದ್ಧ ಪೊಲೀಸರು ಕೇಸು ದಾಖಲಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಪ್ಪಿತಸ್ಥರ ಪೊಲೀಸರ ರಕ್ಷಣೆಗಾಗಿ ಇಲಾಖೆ ಈ ಕ್ರಮ ಜರಗಿಸಿದೆ ಎನ್ನಬಹುದು. ಈ ಬಗ್ಗೆ ಹೋರಾಟ ಮುಂದುವರಿಸಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News