ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮರುಡಾಮರೀಕರಣಕ್ಕೆ ಆಗ್ರಹ
ಪುತ್ತೂರು, ಫೆ.7: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಂಪುಹೊಳೆ-ಅಡ್ಡಹೊಳೆ ರಸ್ತೆಯಲ್ಲಿ 13 ಕಿ.ಮೀ ರಸ್ತೆ ಕಾಮಗಾರಿಯು ಕಳೆದ ವರ್ಷ ಪ್ರಾರಂಭಗೊಂಡು ಇದೀಗ ಸ್ಥಗಿತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. 15 ದಿನಗಳ ಒಳಗಾಗಿ ಈ ರಸ್ತೆ ಮರುಡಾಮರೀಕರಣಗೊಳಿಸದಿದ್ದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಒಂದನೇ ಹಂತದಲ್ಲಿ ಕೆಂಪುಹೊಳೆ-ಹೆಗ್ಗಡೆ ರಸ್ತೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ 2ನೇ ಹಂತದಲ್ಲಿ ಕೆಂಪುಹೊಳೆ-ಅಡ್ಡಹೊಳೆ ರಸತೆ ಕಾಮಗಾರಿ ಆರಂಭಗೊಂಡು ಒಂದು ವರ್ಷಗಳು ಕಳದಿದೆ. ಆದರೆ ಈ ತನಕ 10% ಕಾಮಗಾರಿಯೂ ನಡೆದಿಲ್ಲ. ಈ ಭಾಗದ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ವಾಹನ ಪ್ರಯಾಣಿಕರಿಗೆ ಯಮಯಾತನೆಯಾಗುತ್ತಿದೆ. ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಲ್ಲುತ್ತಿದೆ. ಹಲವಾರು ವಾಹನಗಳು ಅಪಘಾತಕ್ಕೀಡಾಗಿ ಸವಾರರು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ ವಾಸಿಸುತ್ತಿರುವವರಿಗೆ ರಸ್ತೆಯ ದೂಳಿನಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ರಸ್ತೆಯ ದುರಸ್ತಿ ಕೆಲಸವನ್ನು ಆರಂಭಿಸಿದ ಕೆಲ ಸಮಯದಲ್ಲಿಯೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇಲ್ಲಿನ ಕಾಮಗಾರಿಯ ಪೂರ್ಣ ಗುತ್ತಿಗೆಯನ್ನು ಮೊದಲಿಗೆ ಜಿವಿಆರ್ ಎಂಬ ಕಂಪೆನಿಗೆ ನೀಡಲಾಗಿತ್ತು. ಬಳಿಕ ದುರಸ್ತಿ ಕಾಮಗಾರಿಯನ್ನು ಮೊಗೆರೋಡಿ ಕನ್ಸಸ್ಟ್ರಕ್ಷನ್ಸ್ ಅವರಿಗೆ ನೀಡಲಾಗಿದೆ. ಮೊದಲು ಗುತ್ತಿಗೆ ಪಡೆದಿರುವ ಕಂಪೆನಿಯವರು ಇದೀಗ ಹೈಕೋರ್ಟು ಮೆಟ್ಟಲು ಏರಿ ದುರಸ್ತಿ ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಇದರಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ ಎಂದ ಅವರು ಗುತ್ತಿಗೆದಾರರ ಗೊಂದಲದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ದಾಮೋದರ ಡಿ.ಎಂ, ಪ್ರಕಾಶ್ ಗುಂಡ್ಯ ಮತ್ತು ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.