×
Ad

ಸುಳ್ಳು ವದಂತಿಗಳು ಮತ್ತು ಗೊಂದಲಗಳಿಗೆ ಕಿವಿಕೊಡಬೇಡಿ: ಡಾ.ಅನಂತ್ ಪದ್ಮನಾಭ

Update: 2017-02-07 17:43 IST

ಮೂಡಿಗೆರೆ, ಫೆ.7: ದಡಾರ ಮತ್ತು ರುಬೆಲ್ಲಾ ಲಸಿಕೆ ಬಗ್ಗೆ ಸಾರ್ವಜನಿಕರು ವದಂತಿ-ಗೊಂದಲಗಳಿಗೆ ಕಿವಿಕೊಡಬಾರದು. ಪೋಷಕರು ತಾತ್ಸಾರ ತೋರದೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ 9 ತಿಂಗಳಿನಿಂದ 15 ವರ್ಷದ ಪ್ರತಿ ಮಕ್ಕಳು ಈ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹಿರಿಯ ವೈಧ್ಯ ಅನಂತ ಪಧ್ಮನಾಭ ತಿಳಿಸಿದರು.

 ಅವರು ಮಂಗಳವಾರ ಶಾಸಕರ ಮಾದರಿ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಗೆ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ದಡಾರ ಕಾಯಿಲೆಗೆ ಹೊಸ ಲಸಿಕೆಯನ್ನು ಕಂಡು ಹಿಡಿದಿದೆ. ಪ್ರಾಯೋಗಿಕವಾಗಿ ವಿಶ್ವದಲ್ಲೇ ಪ್ರಥಮ ಬಾರಿಗೆ ಕೇಂದ್ರ ಸರಕಾರದ ಸಹಯೋಗದಲ್ಲಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಲಸಿಕೆ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದರು.

   ತಾಲೂಕು ವೈದ್ಯಾಧಿಕಾರಿ ಸುಂದರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು 9ತಿಂಗಳಿನಿಂದ 15 ವರ್ಷದ ಮಕ್ಕಳಿಗೆ ಮಾತ್ರ. ತಾಲೂಕಿನ ಶಾಲೆಯಲ್ಲಿರುವ, ಶಾಲೆ ಬಿಟ್ಟಿರುವ ಹಾಗೂ ವಲಸೆ ಬಂದಿರುವ ಒಟ್ಟು 34.757 ಮಕ್ಕಳಿರುವ ಬಗ್ಗೆ ವರದಿಯಿದೆ. ಮೊದಲ ವಾರದಲ್ಲಿ ತಾಲೂಕಿನಲ್ಲಿರುವ ಶಾಲೆಗಳಲ್ಲಿ, ಎರಡನೇ ವಾರ ಅಂಗನವಾಡಿ ಕೇಂದ್ರಗಳಲ್ಲಿ, ಮೂರನೇ ವಾರ ಹಳ್ಳಿಗಳಲ್ಲಿನ ಕೃಷಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಲಸಿಕೆ ಹಾಕುವ ಕೆಲಸ ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ತಾರನಾಥ್ ಮಾತನಾಡಿ, ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಖಾಸಗೀ ಶಾಲೆಗಳಲ್ಲಿ ದಡಾರ ಮತ್ತು ರೊಬೆಲ್ಲಾ ಲಸಿಕೆ ಬಗ್ಗೆ ಪೋಷಕರ ಅಭಿಪ್ರಾಯ ಪಡೆಯಲಾಗುತ್ತಿದೆ. ಅಲ್ಲದೆ ಸರಕಾರಿ ಶಾಲೆಗಳಲ್ಲಿಯೂ ಕೂಡ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಲಯನ್ಸ್, ಜೆಸಿಐ, ರೋಟರಿ ಸಂಸ್ಥೆ ಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ವಾಡಬೇಕೆಂದು ಮನವಿ ಮಾಡಿದರು.

 ಪಪಂ ಅಧ್ಯಕ್ಷೆ ರಮಿಜಾಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಜಿಪಂ ಸದಸ್ಯೆ ಸುಧಾ ಯೋಗೇಶ್, ಲಯನ್ಸ್ ಅಧ್ಯಕ್ಷ ಚಂದ್ರಕಾಂತ್, ಕಾರ್ಯದರ್ಶಿ ಡಿ.ಕೆ.ಲಕ್ಷ್ಮಣ್‌ಗೌಡ, ರೋಟರಿ ಅಧ್ಯಕ್ಷ ಆಧುನಿಕ್, ಜೇಸಿ ಅಧ್ಯಕ್ಷ ನಯನ ಕಣಚೂರು, ಉಪ ತಹಸೀಲ್ದಾರ್ ಸುಧಾಕರ್, ಮುಖ್ಯ ಶಿಕ್ಷಕಿ ಆಶಾಲತಾ, ಆರೋಗ್ಯ ಇಲಾಖೆಯ ಡಿ.ಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News