ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಪ್ರಾಣ ಉಳಿಸಲು ಸಾಧ್ಯ: ಡಾ. ಮುರಳೀಧರ್
ಚಿಕ್ಕಮಗಳೂರು, ಫೆ.7: (ಪೋಟೋ: ರಕ್ತದಾನ ಶಿಬಿರ) ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರೆ ಮಾತ್ರ ರೋಗಿಗಳ ಪ್ರಾಣ ಉಳಿಸಲು ಸಾಧ್ಯ ಎಂದು ನಗರದ ಸರ್ಕಾರಿ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಮುರಳೀಧರ್ ಹೇಳಿದ್ದಾರೆ.
ಅವರು ಇತ್ತೀಚೆಗೆ ಬಿಲ್ಲವ ಯುವ ವೇದಿಕೆ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಪ್ರತಿದಿನ ಏರುತ್ತಿದೆ, ಅಪಘಾತಗಳಲ್ಲಿ ಗಾಯಗೊಂಡವರಲ್ಲಿ ಬಹಳಷ್ಟು ಜನ ಸಕಾಲಕ್ಕೆ ರಕ್ತ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರೆ ಮಾತ್ರ ಗಾಯಾಳುಗಳನ್ನು ಬದುಕಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ ಎಂದರು.
ರಕ್ತದಾನ ಮಾಡುವುದು ಪುಣ್ಯದ ಕೆಲಸ, ರಕ್ತದಾನ ಮಾಡಿದರೆ ಜೀವದಾನ ಮಾಡಿದಂತೆ, ರಕ್ತವನ್ನು ನೀಡುವುದರಿಂದ ದಾನಿಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾಗುವುದಿಲ್ಲ, ರಕ್ತ ನೀಡುವುದರಿಂದ ಅದು ದೇಹದಲ್ಲಿ ಇನ್ನಷ್ಟು ವೃದ್ದಿಸುತ್ತದೆ, ಕೊಲೆಸ್ಟರಾಲ್ ಅಂಶ ಕಡಿಮೆಯಾಗಿ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸ್ಪರ್ಶ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ ರಕ್ತದಾನವನ್ನು ಜನತೆ ತಮ್ಮ ಕರ್ತವ್ಯವೆಂದು ಭಾವಿಸಬೇಕು, ಸಂಘ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಗಾಗ ಆಯೋಜಿಸಬೇಕು ಎಂದು ಸಲಹೆ ಮಾಡಿದರು.
ಬಿಲ್ಲವ ಸಮಾಜದ ಅಧ್ಯಕ್ಷ ಕೇಶವ್ ಮಾತನಾಡಿ, ರಕ್ತ ಸಂಗ್ರಹಿಸುವ ಕಾರ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ತಮ್ಮ ಸಂಘ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದರು.
ಸಮಾರಂಭದ ನಂತರ ಬಿಲ್ಲವ ಸಮಾಜದ 50ಕ್ಕೂ ಹೆಚ್ಚು ಯುವಜನತೆ ರಕ್ತದಾನ ಮಾಡಿದರು.
ಕಾಫಿ ಬೆಳೆಗಾರ ಬಿ.ಹೆಚ್.ನರೇಂದ್ರಪೈ, ಬಿಲ್ಲವ ಯುವವೇದಿಕೆ ಅಧ್ಯಕ್ಷ ಸಿ.ಎನ್.ಪ್ರವೀಣ್ ಪೂಜಾರಿ, ಮುಖಂಡರಾದ ಜಯಂತಿ, ಅನುಷಾ, ಅಶ್ವಿನಿ ಉಪಸ್ಥಿತರಿದ್ದರು.