ಫೆ. 13ರ ಬಳಿಕ ಜಿಮೇಲ್‌ನಲ್ಲಿ ಈ ಫೈಲ್‌ ಅಟ್ಯಾಚ್‌ ಮಾಡಲು ಸಾಧ್ಯವಿಲ್ಲ!

Update: 2017-02-07 13:47 GMT

ವಾಶಿಂಗ್ಟನ್, ಫೆ. 7: ಜಗತ್ತಿನಾದ್ಯಂತ ಇರುವ ಜಿಮೇಲ್ ಬಳಕೆದಾರರಿಗೆ ಫೆಬ್ರವರಿ 13ರ ಬಳಿಕ ‘.ಜೆಎಸ್’(.js) ಫೈಲ್‌ಗಳನ್ನು ‘ಅಟ್ಯಾಚ್‌ಮೆಂಟ್’ ಆಗಿ ಕಳುಹಿಸಲು ಸಾಧ್ಯವಾಗುವುದಿಲ್ಲ. ಈ ವಿಷಯವನ್ನು ಸರ್ಚ್ ದೈತ್ಯ ಗೂಗಲ್ ತನ್ನ ‘ಜಿ ಸ್ವೀಟ್ ಅಪ್‌ಡೇಟ್ಸ್’ ಬ್ಲಾಗ್‌ನಲ್ಲಿ ಪ್ರಕಟಿಸಿದೆ.

ಮ್ಯಾಲ್‌ವೇರ್ (ದುರುದ್ದೇಶದ ಕಳ್ಳ ಸಾಫ್ಟ್‌ವೇರ್)ನ್ನು ಹರಡಲು ‘.ಜೆಎಸ್’ ಫೈಲ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಗೂಗಲ್ ಭಾವಿಸಿದೆ.

‘‘ಜಿಮೇಲ್ ಭದ್ರತಾ ಕಾರಣಗಳಿಗಾಗಿ ಪ್ರಸಕ್ತ ಕೆಲವು ಮಾದರಿಯ ಫೈಲ್‌ಗಳನ್ನು ಅಟ್ಯಾಚ್ ಮಾಡುವುದನ್ನು ನಿರ್ಬಂಧಿಸಿದೆ. ಉದಾಹರಣೆಗೆ .ಇಎಕ್ಸ್‌ಇ, .ಎಂಎಸ್‌ಸಿ ಮತ್ತು .ಬಿಎಟಿ. 2017 ಫೆಬ್ರವರಿ 13ರಿಂದ ‘.ಜೆಎಸ್’ ಮಾದರಿಯ ಫೈಲ್‌ಗಳನ್ನೂ ನಿರ್ಬಂಧಿಸಲಾಗುತ್ತದೆ’’ ಎಂದು ಕಂಪೆನಿ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ. ಹೊರಹೋಗದ ಮೇಲ್‌ಗಳಿಗೆ ಸಂಬಂಧಿಸಿ ಮೇಲ್ಕಳುಹಿಸುವವರಿಗೆ ಬೌನ್ಸ್ ಮೆಸೇಜ್ ಕಳುಹಿಸಲಾಗುತ್ತದೆ. ಮೇಲ್‌ನ್ನು ಯಾಕೆ ತಡೆಹಿಡಿಯಲಾಗಿದೆ ಎಂಬ ವಿವರಗಳನ್ನು ಅದರಲ್ಲಿ ನೀಡಲಾಗುತ್ತದೆ.

ನಿಜವಾಗಿಯೂ ‘.ಜೆಎಸ್’ ಫೈಲ್‌ಗಳನ್ನು ಕಳುಹಿಸುವ ಅಗತ್ಯವುಳ್ಳವರು, ತಮ್ಮ ಫೈಲ್‌ಗಳನ್ನು ಕಳುಹಿಸಲು ಗೂಗಲ್ ಡ್ರೈವ್, ಗೂಗಲ್ ಕ್ಲೌಡ್ ಸ್ಟೋರೇಜ್ ಅಥವಾ ಇತರ ಸ್ಟೋರೇಜ್‌ಗಳನ್ನು ಬಳಸಬಹುದಾಗಿದೆ ಎಂದು ಬ್ಲಾಗ್ ಹೇಳಿದೆ.

ಜಿಮೇಲ್ ಪ್ರಸಕ್ತ .ಎಡಿಇ, .ಎಡಿಪಿ, .ಬಿಎಟಿ, .ಸಿಎಚ್‌ಎಂ, .ಸಿಎಂಡಿ, .ಸಿಒಎಂ, .ಸಿಪಿಎಲ್, .ಇಎಕ್ಸ್‌ಇ, .ಎಚ್‌ಟಿಎ, .ಐಎನ್‌ಎಸ್, .ಐಎಸ್‌ಪಿ, .ಜೆಎಆರ್, .ಜೆಎಸ್‌ಇ, .ಎಲ್‌ಐಬಿ, .ಎಲ್‌ಎನ್‌ಕೆ, .ಎಂಡಿಇ, .ಎಂಎಸ್‌ಸಿ, .ಎಂಎಸ್‌ಪಿ, .ಎಂಎಸ್‌ಟಿ, .ಪಿಐಎಫ್, .ಎಸ್‌ಸಿಆರ್, .ಎಸ್‌ಸಿಟಿ, .ಎಸ್‌ಎಚ್‌ಬಿ, .ಎಸ್‌ವೈಎಸ್, .ವಿಬಿ, .ವಿಬಿಇ, .ವಿಬಿಎಸ್, .ವಿಎಕ್ಸ್‌ಡಿ, .ಡಬ್ಲುಎಸ್‌ಸಿ, .ಡಬ್ಲುಎಸ್‌ಎಫ್ ಮತ್ತು ಡಬ್ಲುಎಸ್‌ಎಚ್ ಫೈಲ್‌ಗಳನ್ನು ಕಳುಹಿಸುವುದನ್ನು ನಿರ್ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News