×
Ad

ಡೆಬಿಟ್ ಕಾರ್ಡ್ ಶುಲ್ಕ ಇಳಿಕೆ: ಸರಕಾರದ ವಿಶ್ವಾಸ

Update: 2017-02-07 20:06 IST

ಹೊಸದಿಲ್ಲಿ, ಫೆ.7: ಡಿಜಿಟಲ್ ವ್ಯವಹಾರ ಹೆಚ್ಚಿದಂತೆ ಡೆಬಿಟ್ ಕಾರ್ಡ್‌ಗಳ ಶುಲ್ಕ ಕಡಿಮೆಯಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 2 ಲಕ್ಷಕ್ಕಿಂತ ಹೆಚ್ಚಿನ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಮಾರ್ಜಿನಲ್ ಡಿಸ್ಕೌಂಟ್ ಚಾರ್ಜ್ (ಎಂಡಿಆರ್) ನಿಗದಿಪಡಿಸಲು ಆರ್‌ಬಿಐ ಚಿಂತನೆ ನಡೆಸಿದೆ. ಡಿಜಿಟಲ್ ವ್ಯವಹಾರದ ಪ್ರಮಾಣ ಹೆಚ್ಚಿದಂತೆ ಡೆಬಿಟ್ ಕಾರ್ಡ್ ಶುಲ್ಕ ಕಡಿಮೆಯಾಗಲಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

 ಪಾವತಿ ಮತ್ತು ಸಂದಾಯ ಕಾಯ್ದೆಯಡಿ 1,000 ರೂ.ವರೆಗಿನ ನಗದು ವ್ಯವಹಾರಕ್ಕೆ 0.25 ಶೇಕಡಾ ಎಂಡಿಆರ್ ಶುಲ್ಕ, 2,000 ರೂ.ವರೆಗಿನ ನಗದು ವ್ಯವಹಾರಕ್ಕೆ 0.50 ಶೇಕಡಾ ಶುಲ್ಕ ವಿಧಿಸಲು ಮತ್ತು 2,000 ರೂ. ಮೀರಿದ ವ್ಯವಹಾರಕ್ಕೆ ವಿಧಿಸಬಹುದಾದ ಶುಲ್ಕದ ಬಗ್ಗೆ ಆರ್‌ಬಿಐ ಶೀಘ್ರ ನಿರ್ಧರಿಸಲಿದೆ ಎಂದರು.

ಪೆಟ್ರೋಲ್ ಕಂಪೆನಿಗಳಲ್ಲಿ ನಡೆಸುವ ಡೆಬಿಟ್ ಕಾರ್ಡ್ ವ್ಯವಹಾರದಲ್ಲಿ ಶುಲ್ಕವನ್ನು ತೈಲ ಕಂಪೆನಿಗಳು ಭರಿಸಬೇಕು ಮತ್ತು ರೈಲು ಸಂಚಾರದ ವೇಳೆ ನಡೆಸಲಾಗುವ ಡಿಜಿಟಲ್ ವ್ಯವಹಾರದ ಶುಲ್ಕವನ್ನು ಸರಕಾರ ಭರಿಸಲಿದೆ ಎಂದವರು ತಿಳಿಸಿದರು. ನೂತನ ತಂತ್ರಜ್ಞಾನದಿಂದಾಗಿ ಟಿಜಿಟಲ್ ವ್ಯವಹಾರ ಅಗ್ಗವಾಗಲಿದೆ ಮತ್ತು ಸರಕಾರಿ ಅಧಿಕಾರಿಗಳು ಡಿಜಿಟಲ್ ವ್ಯವಹಾರ ನಡೆಸಬೇಕು ಎಂದವರು ಸಲಹೆ ನೀಡಿದರು.

 ನೋಟು ಅಮಾನ್ಯದ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸರಕಾರ ಹೊಸ ನೋಟುಗಳ ಮುದ್ರಣ ಕಾರ್ಯವನ್ನು ಸಾಕಷ್ಟು ಮುಂಚಿತವಾಗಿಯೇ ಆರಂಭಿಸಿತ್ತು.ಆದರೆ ಹೊಸ ನೋಟುಗಳಿಗೆ ಎಟಿಎಂ ಯಂತ್ರಗಳನ್ನು ಮರು ಹೊಂದಿಸುವ ಕಾರ್ಯ ಸ್ವಲ್ಪ ವಿಳಂಬಗೊಂಡಿದ್ದರಿಂದ ಸಮಸ್ಯೆಯಾಯಿತು . ಗೋಪ್ಯತೆ ಕಾಯ್ದುಕೊಳ್ಳಬೇಕಿದ್ದ ಕಾರಣ ಎಟಿಎಂ ಯಂತ್ರಗಳನ್ನು ಮೊದಲೇ ಮರುಹೊಂದಿಸಲು ಆಗಲಿಲ್ಲ ಎಂದರು. 1,000 ಮತ್ತು 500 ರೂ. ನೋಟುಗಳನ್ನು ಅಮಾನ್ಯಗೊಳಿಸುವುದು ಸರಕಾರದ ನಿರ್ಧಾರವಾಗಿದ್ದಲ್ಲಿ 2,000 ರೂ. ನೋಟುಗಳನ್ನು ಚಲಾವಣೆಗೆ ತರುವ ಉದ್ದೇಶವೇನಿತ್ತು ಎಂಬ ಪ್ರಶ್ನೆಗೆ, ಜನರು ಹಣವನ್ನು ಸಂಗ್ರಹಿಸುತ್ತಾರೆ ಎಂಬ ಕಾರಣದಿಂದ ಹೀಗೆ ಮಾಡಲಾಯಿತು ಎಂದರು.

 ಕಪ್ಪು ಹಣದ ಸಮಸ್ಯೆ ನಿವಾರಿಸಲು ನೋಟು ಅಮಾನ್ಯಗೊಳಿಸುವುದು ಅನಿವಾರ್ಯವಾಗಿತ್ತು ಎಂದ ಜೇಟ್ಲೀ, ಕಪ್ಪುಹಣವನ್ನು ಇತರ ಕೆಲ ದೇಶಗಳ ಮೂಲಕ ಸುತ್ತಿ ಬಳಸಿ ತರುವುದನ್ನು ನಿಯಂತ್ರಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News