ನಾಪತ್ತೆಯಾದ 59 ಸಿಆರ್‌ಪಿಎಫ್ ಕಮಾಂಡೊಗಳು !
ಬಿಹಾರ, ಫೆ.7: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 59 ಶಿಕ್ಷಾರ್ಥಿ (ಟ್ರೈನಿ) ಕಮಾಂಡೊಗಳು ಕರ್ತವ್ಯಕ್ಕೆ ಹಾಜರಾಗದೆ ಅಜ್ಞಾತ ಸ್ಥಳಕ್ಕೆ ತೆರಳಿರುವ ಘಟನೆ ನಡೆದಿದ್ದು , ಈ ಅಸಹಜ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಆರ್‌ಪಿಎಫ್‌ನ ವಿಶಿಷ್ಟ ದಳವಾಗಿರುವ ಅರಣ್ಯ ಕದನ ಮತ್ತು ಮಾವೋವಾದಿ ವಿರೋಧಿ ಪಡೆ (ಕೋಬ್ರಾ) ಯ 59 ಮಂದಿ ಟ್ರೈನೀ ಕಮಾಂಡೊಗಳು ಶ್ರೀನಗರದಲ್ಲಿ ಐದು ವಾರಗಳ ಮೂಲ ಪ್ರಶಿಕ್ಷಣ ಪಡೆದಿದ್ದು ಇವರಿಗೆ ಬಿಹಾರದಲ್ಲಿರುವ ನಕ್ಸಲ್ ಬಾಧಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಈ ಪ್ರಕಾರ ಹೊರಟಿದ್ದ ಕಮಾಂಡೋಗಳು, ಮುಘಲ್‌ಸರಾಯ್ ರೈಲು ನಿಲ್ದಾಣ ತಲುಪುತ್ತಿದ್ದಂತೆಯೇ ಮನಸ್ಸು ಬದಲಿಸಿ, ಪ್ರಯಾಣ ಮುಂದುವರಿಸದಿರಲು ನಿರ್ಧರಿಸಿದ್ದಾರೆ. ರೈಲಿನಿಂದ ಇಳಿದ ಬಳಿಕ ಅವರು ಎಲ್ಲಿಗೆ ತೆರಳಿದ್ದಾರೆಂಬ ಮಾಹಿತಿ ತಿಳಿದು ಬಂದಿಲ್ಲ. ಬಹುಷಃ ಇವರು ತಮ್ಮ ಮನೆಗೆ ತೆರಳಿರಬಹುದು ಎಂದು ಊಹಿಸಲಾಗಿದೆ. ರಾತ್ರಿ ವೇಳೆ ಈ ನಿರ್ಧಾರಕ್ಕೆ ಬಂದಿರುವ ಕಮಾಂಡೊಗಳು ತಮ್ಮೆಡನಿದ್ದ ಕಮಾಂಡರ್‌ನ ಗಮನಕ್ಕೆ ಬಾರದಂತೆ ಪಲಾಯನ ಮಾಡಿದ್ದಾರೆ.
2011ರಲ್ಲಿ ಸಿಆರ್‌ಪಿಎಫ್‌ಗೆ ನಿಯುಕ್ತಿಗೊಂಡಿದ್ದ ಕಾನ್‌ಸ್ಟೆಬಲ್ ಶ್ರೇಣಿಯ ಈ ಯೋಧರ ‘ಸಾಮೂಹಿಕ ಚಕ್ಕರ್’ ನಿಂದ ಆಘಾತಗೊಂಡಿರುವ ಸಿಆರ್‌ಪಿಎಫ್ ಈ ಘಟನೆಯ ಬಗ್ಗೆ ಕೋರ್ಟ್ ತನಿಖೆಗೆ ಆದೇಶಿಸಿದ್ದು ಇದು ‘ ಅನಧಿಕೃತ ಗೈರುಹಾಜರು’ ಎಂದು ವಿಶ್ಲೇಷಿಸಿದೆ.
ಬಿಹಾರದಲ್ಲಿ ವಿಶೇಷ ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಈ ಕಮಾಂಡರ್‌ಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು ಇವರು ಸೋಮವಾರ ಬಿಹಾರದ ಗಯಾದಲ್ಲಿರುವ 205ನೇ ಕೋಬ್ರಾ ವಿಭಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.
ಈ ಕಮಾಂಡೋಗಳ ಜೊತೆಗಿದ್ದ ತರಬೇತುದಾರರು ಮತ್ತು ಕಮಾಂಡರ್‌ಗಳು ಪಲಾಯನ ಮಾಡಿರುವ ಕೆಲವರನ್ನು ಸಂಪರ್ಕಿಸಲು ಶಕ್ತರಾಗಿದ್ದು ಬುಧವಾರ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಹೀಗೆ ಪಲಾಯನ ಮಾಡಿರುವ ಕಮಾಂಡೊಗಳು ಶಸ್ತ್ರಾಸ್ತ್ರ ಹೊಂದಿರಲಿಲ್ಲ ಮತ್ತು ಇವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರಪ್ರದೇಶ ನಿವಾಸಿಗಳಾಗಿದ್ದಾರೆ ಎಂದವರು ತಿಳಿಸಿದ್ದಾರೆ.