ತೆಂಗಿನ ಎಲೆ ತಿನ್ನುವ ಹುಳರೋಗ ನಿಯಂತ್ರಣ ಕ್ರಮ
ಮಂಗಳೂರು,ಫೆ.7: ಎಲೆ ತಿನ್ನುವ ಕಪ್ಪುತಲೆ ಹುಳು (ಒಪಿಸಿನಾ ಅರೆನೋಸೆಲ್ಲ) ಇದನ್ನು ತೆಂಗಿನ ಎಲೆ ತಿನ್ನುವ ಹುಳ ಅಥವಾ ಕಪ್ಪುತಲೆ ಹುಳ ಎಂದು ಕರೆಯುತ್ತಾರೆ. ಈ ಕೀಟ ಮರಿ ಹುಳುವಿನ ಹಂತದಲ್ಲಿ (ಕ್ಯಾಟರ್ ಪಿಲ್ಲರ್) ಹಾನಿ ಉಂಟು ಮಾಡುತ್ತದೆ. ಈ ಮರಿ ಹುಳಗಳು ಎಲೆಯ ತಳಭಾಗದಲ್ಲಿ ಸೇರಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಸಾಮಾನ್ಯವಾಗಿ ಈ ಹುಳುವಿನ ಬಾಧೆ ಜನವರಿಯಿಂದ ಪ್ರಾರಂಭವಾಗಿ ಬೇಸಿಗೆ ತಿಂಗಳಲ್ಲಿ ತೀವ್ರವಾಗುತ್ತದೆ. ಮಳೆಗಾಲ ಪ್ರಾರಂಭವಾದಂತೆ ತೀವ್ರತೆ ಕಡಿಮೆಯಾಗುತ್ತದೆ.
ನಿಯಂತ್ರಣ ಮಾಡುವ ಕ್ರಮಗಳು: ಗರಿ ತಿನ್ನುವ ಹುಳದ ಹಾನಿಯನ್ನು ಕಡಿಮೆ ಮಾಡಲು ಬಾಧೆಗೆ ತುತ್ತಾದ ಗರಿಗಳನ್ನು ತೆಗೆದು ಸುಡಬೇಕು. ತೆಂಗಿನ ಕಪ್ಪುತಲೆ ಹುಳವನ್ನು ನಿಯಂತ್ರಿಸಲು ಪರೋಪಜೀವಿಗಳನ್ನು ಬಿಡುಗಡೆ ಮಾಡಬೇಕು. ಕಪ್ಪುತಲೆ ಹುಳ ಮರಿ ಹುಳುವಿನ ಹಂತದಲ್ಲಿದ್ದಾಗ ಗೋನಿಯೋಜಸ್ ನೆಾಂಟಿಡಿಸ್ ಎಂಬ ಪರೋಪ ಜೀವಿಯನ್ನು ಪ್ರತಿ ಕೀಟಬಾತ ಮರಕ್ಕೆ ಸುಮಾರು 10 ಅಥವಾ ಬ್ರಾಕೋನ್ ಬ್ರೆವಿಕೊರ್ನಿಸ್ ಸುಮಾರು 15 ರಂತೆ ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 4 ಬಾರಿ ಬಿಡುಗಡೆ ಮಾಡಬೇಕು. ಸೂಕ್ತವಾಗಿ ನೀರಿನ ನಿರ್ವಹಣೆಯನ್ನು ಮಾಡುವುದು ಮತ್ತು ಮಣ್ಣಿನಲ್ಲಿ ನೀರಿನ ತೇವಾಂಶವನ್ನು ಕಾಪಾಡಲು ಸಾವಯವ ಹೊದಿಕೆಯನ್ನು ಅಳವಡಿಸಬೇಕು.
ಸಮತೋಲನ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಟ್ರೈಕೊಡರ್ಮಾ, ಬೇವಿನ ಹಿಂಡಿ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಪ್ರತೀ ವರ್ಷಕ್ಕೆ 5 ಕೆಜಿಯಂತೆ ಪ್ರತೀ ಮರಕ್ಕೆ ಹಾಕಬೇಕು. ಸಾವಯವ ಜೀವರಾಶಿಯ ಮರುಬಳಕೆಯನ್ನು, ಹಸಿರು ಬೆಳೆಗಳಾದ ಅಲಸಂಡೆಯನ್ನು ತೆಂಗಿನ ಮರದ ಬುಡದಲ್ಲೇ ಬೆಳೆಸಿ, ಇದನ್ನು ಮಣ್ಣಿಗೆ ಸೇರುವಂತೆ ಮಾಡುವುದರಿಂದ ಸಲು ಹೆಚ್ಚಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.