ರಾಜಕೀಯ ಪ್ರೇರಿತ ಹೇಳಿಕೆ: ಸತೀಶ್ ಅಮಿನ್ ಪಡುಕೆರೆ
ಉಡುಪಿ, ಜ.31: ಮಲ್ಪೆ-ಪಡುಕೆರೆ ಸಂಪರ್ಕಿಸುವ ಸೇತುವೆ ಕಾಮಗಾರಿಯ ಕುರಿತಂತೆ ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ವಾಗಿದೆ. ಶಾಸಕರು ಬೇಕೆಂದೇ ಕಾಮಗಾರಿಯಲ್ಲಿ ವಿಳಂಬ ಮಾಡುತಿದ್ದಾರೆ ಎಂಬ ಆರೋಪವನ್ನು ಖಂಡಿಸುವುದಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸೇತುವೆಯ ಮೇಲುಸ್ತುವಾರಿ ಸಮಿತಿ ಕಾರ್ಯದರ್ಶಿ ಸತೀಶ್ ಅಮೀನ್ ಪಡುಕೆರೆ ಹೇಳಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಶಾಸಕತ್ವದ ಕೊನೆಯ ದಿನಗಳಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಸೇತುವೆ ವಿನ್ಯಾಸ ಸಿದ್ಧಗೊಳ್ಳದೇ, ಯೋಜನೆಯ ಬಗ್ಗೆ ಸ್ಪಷ್ಟತೆ ಇಲ್ಲದೇ ತರಾತುರಿಯಿಂದ ರಘುಪತಿ ಭಟ್ ಅವರು ಶಿಲಾನ್ಯಾಸ ನೆರವೇರಿಸಿದ್ದರು ಎಂದು ದೂರಿದರು.
ಒಟ್ಟು 13.50 ಕೋಟಿ ರೂ.ವೆಚ್ಚದ ಮಲ್ಪೆ-ಪಡುಕೆರೆ ಸೇತುವೆ ಕಾಮಗಾರಿಗೆ 2013ರ ಫೆ.18ರಂದು ಗುತ್ತಿಗೆದಾರ ಸಂಸ್ಥೆಯಾದ ಯೋಜಕ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದರು. ಯೋಜಕ ಸಂಸ್ಥೆ ಕಾಮಗಾರಿ ಪ್ರಾರಂಭಿಸಿದಾಗ ರಾಜ್ಯದಲ್ಲಿ ಚುನಾವಣೆ ನಡೆದು ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಿದ್ದು, 2013ರ ಮೇ 13ರಂದು ಪ್ರಮೋದ್ ಶಾಸಕರಾದ ನಂತರ ಸಂಸ್ಥೆ ನಿರ್ವಹಿಸಿದ ಕಾಮಗಾರಿಯ ಪ್ರಗತಿ ಆಧಾರದಲ್ಲಿ ನ.6ರಿಂದ ಬಿಲ್ಲಿನ ಹಣದ ಪಾವತಿ ಪ್ರಾರಂಭಿಸಲಾಗಿತ್ತು ಎಂದರು.
ಈ ನಡುವೆ ಸೇತುವೆಯ ವಿನ್ಯಾಸವನ್ನು ಬದಲಿಸಿ, ಸೇತುವೆ ಅಗಲವನ್ನು 4.25ಮೀ.ನಿಂದ 5.25 ಮೀ.ಗೆ ಹೆಚ್ಚಿಸಲಾಗಿತ್ತು. ಅಲ್ಲದೇ ಸೇತುವೆ ಎರಡೂ ಕಡೆಗಳಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಹಾಗೂ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ನೀಡುವ ಹೊರೆ ಬಂತು. ಅವರಿಗೆ ಸೂಕ್ತ ಪರಿಹಾರ ನೀಡಿ ಸ್ಥಳವನ್ನು ನಗರಸಭೆ ಹೆಸರಿನಲ್ಲಿ ದಾನಪತ್ರ ಮಾಡಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು 2014ರ ಕೊನೆಯಲ್ಲಿ ಪುನರಾರಂಭಿಸಲಾಯಿತು ಎಂದು ಸ್ಪಷ್ಟಪಡಿಸಿದರು.
ಸೇತುವೆ ಕಾಮಗಾರಿಗೆ 13.50 ಕೋಟಿರೂ.ಗಳ ಅಂದಾಜು ವೆಚ್ಚ ಬಳಿಕ 16.86 ಕೋಟಿ ರೂ.ಗಳಿಗೆ ಏರಿಕೆಯಾಯಿತು. ಹೆಚ್ಚುವರಿಯಾದ 3.36 ಕೋಟಿ ರೂ.ಗಳನ್ನು ಬೇರೆ ಬೇರೆ ನಿಧಿಯಿಂದ ಪಡೆದು ನಿರ್ವಹಿಸಲಾಗುತ್ತಿದೆ. ಇಲ್ಲಿ ಯಾವುದೇ ರೀತಿಯ ನಿರ್ಲಕ್ಷ ಆಗಿಲ್ಲ. ಜನಪ್ರತಿನಿಧಿಯಾಗಿ ಪ್ರಮೋದ್ ಅವರು ತಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತಿದ್ದಾರೆ. ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅವರು ಬದ್ಧರಾಗಿದ್ದಾರೆ ಎಂದು ಸತೀಶ್ ಅಮೀನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯರಾದ ಜನಾರ್ದನ ಭಂಡಾರ್‌ಕರ್, ಗಣೇಶ ನೇರ್ಗಿ, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವೆಂಕಪ್ಪ ಅಮೀನ್, ಸುದರ್ಶನ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.