ಮುಲ್ಕಿಯಲ್ಲಿ ಸೊಳ್ಳೆ ಉತ್ಪದನಾ ಕೇಂದ್ರ: ತಾತ್ಕಾಲಿಕ ಪರಿಹಾರಕ್ಕೆ ಸ್ಥಳೀಯರ ಆಗ್ರಹ
ಮುಲ್ಕಿ, ಫೆ.7: ರಾಷ್ಟ್ರೀಯ ಹೆದ್ದಾರಿ ಷತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಕಳೆದ ಕೆಲ ತಿಂಗಳಿನಿಂದ ಮುಲ್ಕಿ ಬಸ್ ನಿಲ್ದಾಣದ ಸಮೀಪ ಆರಾರ್ ಟವರ್ಸ್ ಮುಂಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು ವಿಪರೀತ ದುರ್ವಾಸನೆಯುಕ್ತ ವಾತಾವರಣ ಸೃಷ್ಠಿಯಾಗಿದೆ.
ಮುಲ್ಕಿ ಬಸ್ಸು ನಿಲ್ದಾಣದ ಬಳಿಯ ಹೋಟೇಲು ಹಾಗೂ ಆಸ್ಪತ್ರೆಗಳ ತ್ಯಾಜ್ಯ ನೀರು ಒಳಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯಲ್ಲೇ ಶೇಖರಣೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವಾಗಿರುವ ಕಾರಣ ಮುಲ್ಕಿ ನಗರ ಪಂಚಾಯತ್‌ನ ವತಿಯಿಂದ ನಡೆಯಬೇಕಿದ್ದ ಒಳಚರಂಡಿ ಕಾಮಗಾರಿಗೂ ತೊಡಕುಂಟಾಗಿದೆ. ಕೊಳಚೆ ನೀರು ಹೆದ್ದಾರಿ ಬದಿಯಲ್ಲಿ ಶೇಖರಣೆಗೊಂಡು ಕೆರೆಯಾಗಿ ಪರಿಣಮಿಸಿದ್ದು, ರೋಗ ಹರಡುವ ಸೊಳ್ಳೆಗಳ ವಾಸಸ್ಥಾನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ದಿನಗಳ ಹಿಂದೆ ಮುಲ್ಕಿಯಲ್ಲಿ ಹೆದ್ದಾರಿ ಕಾಮಗಾರಿ ನಿಧಾನ ಗತಿಯಿಂದ ಸಾಗುತ್ತಿರುವ ಬಗ್ಗೆ ಸ್ಥಳಿಯರು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿರುವ ಬಗ್ಗೆ ಅರಿತ ಸಂಸದರು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಹೆದ್ದಾರಿ ಇಲಾಖೆಗೆ ತಾಕೀತು ಮಾಡಿದ್ದರು. ಆದರೆ, ಸಂಸದರ ಮಾತಿಗೂ ಬೆಲೆ ನೀಡದ ಗುತ್ತಿಗೆದಾರರು ಕಾಮಗಾರಿ ಇದು ವರೆಗೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿಯಲ್ಲಿ ಕೊಳಚೆ ನೀರಿನಿಂದ ಈಗಾಗಲೇ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವ ಪ್ರದೇಶವನ್ನು ಮುಲ್ಕಿ ನಗರ ಪಂಚಾಯತ್ ಕೂಡಲೇ ತಾತ್ಕಾಲಿಕ ನೆಲೆಯಲ್ಲಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.