ಪುತ್ತೂರು: ಮಹಿಳೆಯ ಮಾನಭಂಗ ಯತ್ನ: ಆರೋಪಿಯ ಬಂಧನ
ಪುತ್ತೂರು, ಫೆ. 7: ಕಳೆದ 3 ವರ್ಷಗಳ ಹಿಂದೆ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಪುಂಡಿಕಾಯಿ ನಿವಾಸಿ ಕೊರಗಪ್ಪ ನಾಯ್ಕ ಎಂಬವರ ಪುತ್ರ ಗಣೇಶ್ ನಾಯ್ಕ ಬಂಧಿತ ಆರೋಪಿ.
ಗಣೇಶ್ ನಾಯ್ಕ 2014ರಲ್ಲಿ ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದ ಸಂದರ್ಭದಲ್ಲಿ ಅಕ್ರಮವಾಗಿ ಪ್ರವೇಶಿಸಿ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆ ವೇಳೆ ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಗಣೇಶ್ ನಾಯ್ಕ ಬಳಿಕ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆತನ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗಣೇಶ್ ನಾಯ್ಕ ಸೋಮವಾರ ಈಶ್ವರಮಂಗಲಕ್ಕೆ ಬಂದಿದ್ದ ವೇಳೆ ಈಶ್ವರಮಂಗಲ ಹೊರ ಠಾಣೆಯ ಎಎಸ್‌ಐ ತಿಮ್ಮಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಹೆಡ್‌ಕಾನ್‌ಸ್ಟೇಬಲ್ ಕುಂಞಣ್ಣ ಮತ್ತು ಕಾನ್‌ಸ್ಟೇಬಲ್ ಮಧು ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಸೋಮವಾರ ರಾತ್ರಿ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.