×
Ad

10 ಲಕ್ಷ ನಗದು ಪ್ರಶಸ್ತಿ ಗೆದ್ದ ವೇಣೂರು ಸರಕಾರಿ ಶಾಲೆ

Update: 2017-02-07 23:59 IST

ಬೆಳ್ತಂಗಡಿ, ಫೆ.7: ದ.ಕ. ಜಿಲ್ಲೆಯ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆ ಕೊಡಮಾಡುವ ದಿ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಗೆ ವೇಣೂರು ಸರಕಾರಿ ಪ್ರೌಢ ಶಾಲೆಯು ಆಯ್ಕೆಯಾಗಿದ್ದು, ಪ್ರಶಸ್ತಿಯೊಂದಿಗೆ ರೂ.10 ಲಕ್ಷ ನಗದು ಪುರಸ್ಕಾರವನ್ನು ಶಾಲೆ ಪಡೆದಿದೆ.

ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳಿರುವಾಗಲೇ ಇಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವೇಣೂರು ಪ್ರೌಢಶಾಲೆಯಲ್ಲಿ 2011-12ರ ಸಾಲಿನಲ್ಲಿ 437 ವಿದ್ಯಾರ್ಥಿಗಳಿದ್ದರೆ, 2015-16ನೆ ಸಾಲಿಗೆ ಇದು 552ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಶಾಲೆ 97 ಶೇ. ಫಲಿತಾಂಶ ದಾಖಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ: 
 ಪ್ರತೀ ಕೊಠಡಿಯಲ್ಲಿ ತರಗತಿ ಗ್ರಂಥಾಲಯ, ಗ್ರೀನ್ ಬೋರ್ಡ್, ಕಂಪ್ಯೂಟರ್ ಕೊಠಡಿಯಲ್ಲಿ ಬೋಧನೆಗೆ ಪ್ರಾಜೆಕ್ಟರ್ ಬಳಕೆ. ಮಕ್ಕಳ ಶೈಕ್ಷಣಿಕ ಪ್ರಗತಿ, ಹಾಜರಾತಿ ಹಾಗೂ ಶಾಲಾ ಕಾರ್ಯಕ್ರಮಗಳ ವಿವರವನ್ನು ಮಕ್ಕಳಿಗೆ, ಪೋಷಕರಿಗೆ ತಿಳಿಸಲು ಎಸ್ಸೆಮ್ಮೆಸ್ ಬಳಕೆ, ಬೆಳಗ್ಗೆ ಮಿಸ್‌ಕಾಲ್ ನೀಡಿ ಮಕ್ಕಳನ್ನು ಎಬ್ಬಿಸುವ ವಿನೂತನ ವ್ಯವಸ್ಥೆಯೂ ಇಲ್ಲಿದೆ. ದಾನಿಗಳ ಸಹಕಾರದಿಂದ ಶಾಲಾ ಆವರಣಕ್ಕೆ ಇಂಟರ್‌ಲಾಕ್ ಅಳವಡಿಕೆ, ಅತ್ಯುತ್ತಮ ಶೌಚಾಲಯಗಳು, ಶಿಕ್ಷಕರ ಕೊಠಡಿಗಳು ನಿರ್ಮಾಣವಾಗಿದ್ದು, ಗೌರವ ಶಿಕ್ಷಕರಿಗೆ ವೇತನ ಪಾವತಿಯೂ ದಾನಿಗಳೇ ಮಾಡುತ್ತಿದ್ದಾರೆ.

ಶೈಕ್ಷಣಿಕ ಸಾಧನೆ: 
2015-16ನೆ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಕಾರಿ ಶಾಲೆಗಳ ಕನ್ನಡ ಮಾಧ್ಯಮದಲ್ಲಿ ನಿಶಾ 616 ಅಂಕ ಗಳಿಸಿ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಈ ಶಾಲೆಯ ಹೆಗ್ಗಳಿಕೆ. ಈಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರೂ. 10,000 ಮೊತ್ತದ ಪುರಸ್ಕಾರ ಲಭಿಸಿದೆ. ಕ್ರೀಡೆಯಲ್ಲೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಇಲ್ಲಿನ ವಿದ್ಯಾರ್ಥಿಗಳು ಗಳಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿನಿ ಪ್ರಜ್ಞಾ ಸಾಂಸ್ಕೃತಿಕ ಸ್ಪರ್ಧೆಯ ಅಣುಕು ಸಂಸತ್ತು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಇಲ್ಲಿನ ಶಿಕ್ಷಕ ವೃಂದ ಮಕ್ಕಳಲ್ಲಿ ಸಂಸ್ಕಾರದ ಪಾಠ ಮೂಡಿಸುತ್ತಿದ್ದಾರೆ. ಇಂಗ್ಲಿಷ್ ಕಲರವವೂ ಇಲ್ಲಿ ಕೇಳಲಾರಂಭಿಸಿದೆ. 2016-17ರ ಶೈಕ್ಷಣಿಕ ವರ್ಷದಿಂದಲೇ 8ನೆ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣ ಇಲ್ಲಿ ನೀಡಲಾಗುತ್ತಿದ್ದು, 48 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಮಕ್ಕಳ ದತ್ತು ಪಡೆಯುತ್ತಿರುವ ಶಿಕ್ಷಕರು
ಉತ್ತಮ ಫಲಿತಾಂಶಕ್ಕಾಗಿ ಪ್ರತೀ ಶಿಕ್ಷಕರಿಗೆ 15 ಮಕ್ಕಳನ್ನು ದತ್ತು ನೀಡಿ ವಿದ್ಯಾರ್ಜನೆಗೆ ಪ್ರೇರೇಪಿಸುವುದು ಇಲ್ಲಿನ ವಿಶೇಷತೆ. ಅವರ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡು ಪರೀಕ್ಷೆಗೆ ಮೊದಲು ನಾಲ್ಕು ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಜತೆಗೆ ವಿದ್ಯಾರ್ಥಿಯ ಹೆತ್ತವರೊಡನೆಯೂ ಸಮಾಲೋಚಿಸಲಾಗುತ್ತದೆ. ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ವಿದ್ಯಾರ್ಥಿಗೆ ಕರೆ ಮಾಡಿ ಬೆಳಗ್ಗೆ ಎಬ್ಬಿಸುವ ಕಾರ್ಯವನ್ನೂ ಶಿಕ್ಷಕರು ಮಾಡುತ್ತಾರೆ. ಶಾಲೆಯಲ್ಲಿ ಪ್ರಸ್ತುತ 15 ಶಿಕ್ಷಕರು, ಮೂವರು ಕಚೇರಿ ಸಿಬ್ಬಂದಿ ಹಾಗೂ ಆರು ಮಂದಿ ಅಡುಗೆ ಸಿಬ್ಬಂದಿ ಇದ್ದಾರೆ. ಎಸೆಸೆಲ್ಸಿ ಮಕ್ಕಳ ಪೋಷಕರ ಸಭೆಯನ್ನು ಎರಡು ಬಾರಿ ಕರೆಯಲಾಗಿದ್ದು, ಪ್ರತ್ಯೇಕವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪೋಷಕರನ್ನು ಸಭೆಯನ್ನು 2 ಬಾರಿ ಕರೆದು ಅವರೊಂದಿಗೆ ಚರ್ಚಿಸಿ ಮಕ್ಕಳು ಕಲಿಕೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News