ಫೆ.28ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ

Update: 2017-02-08 12:36 GMT

ಮಂಗಳೂರು, ಫೆ.8: ದೇಶಾದ್ಯಂತ 10 ಲಕ್ಷ ಸದಸ್ಯ ಬಲ ಹೊಂದಿರುವ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ(ಯುಡಿಬಿಯು)ಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಿಬ್ಬಂದಿ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಹಾಗೂ ಸಾರ್ವಜನಿಕರ ಗಮನ ಸೆಳೆಯಲು ಫೆ.28ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾ ಒಕ್ಕೂಟ (ಎಐಬಿಒಯು)ದ ಅಧ್ಯಕ್ಷ ಎಲ್ಲೂರು ಸುದರ್ಶನ ತಿಳಿಸಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದ ಫಲವಾಗಿ ಬ್ಯಾಂಕ್‌ನಲ್ಲಿ ತುರ್ತಾಗಿ ಮಾಡಬೇಕಾದ ಅನೇಕ ಕೆಲಸಗಳು ಬಾಕಿ ಉಳಿದಿವೆ. ಅನುತ್ಪಾದಕ ಆಸ್ತಿ ವಸೂಲಾತಿ ತೀವ್ರಗೊಳಿಸದಿದ್ದರೆ ಅನೇಕ ಬ್ಯಾಂಕುಗಳು ನಷ್ಟ ಹೊಂದುವ ಭಯ ವ್ಯಕ್ತಪಡಿಸಿದರು.

ಬ್ಯಾಂಕ್ ಸಿಬ್ಬಂದಿ, ಸದಸ್ಯರು ಎಷ್ಟೇ ಶ್ರಮ ವಹಿಸಿ ಗ್ರಾಹಕರ ಸೇವೆಗೆ ಆದ್ಯತೆ ಕೊಟ್ಟರೂ ಅಮಾನ್ಯೀಕರಣದ ಪರಿಣಾಮವಾಗಿ ಗ್ರಾಹಕರ ಸಂತೃಪ್ತಿ ಹೊಂದುತ್ತಿಲ್ಲ ಎಂದು ಎಲ್ಲೂರು ಸುದರ್ಶನ ಕಳವಳ ವ್ಯಕ್ತಪಡಿಸಿದರು.

ಸರಕಾರವು ಸುಧಾರಣೆ ಹೆಸರಲ್ಲಿ ಕಾರ್ಮಿಕ ಕಾಯ್ದೆಗೆ ಅನೇಕ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವುದು ಕಾರ್ಮಿಕರಿಗೆ ಮಾರಕವಾಗಬಹುದೇ ಹೊರತು ಒಳಿತಾಗುವುದಿಲ್ಲ. ಕಾರ್ಮಿಕ ವಿರೋಧಿ ಧೋರಣೆಗಳನ್ನು ಸರಕಾರವು ಕೈಬಿಟ್ಟು ಕಾರ್ಮಿಕರ ಆಶೋತ್ತರಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಅದರಲ್ಲಿ ವಿಶೇಷವಾಗಿ ಕೇಂದ್ರ ಸರಕಾರಿ ನೌಕರರಿಗೆ ಕೊಟ್ಟಂತಹ 20 ಲಕ್ಷ ರೂ. ಗ್ರಾಚ್ಯೂಟಿಯನ್ನು ಗ್ರಾಚ್ಯೂಟಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರಿಗೆ 20 ಲಕ್ಷ ರೂ. ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದರು.

ಬ್ಯಾಂಕ್‌ನಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿ ಆಗಬೇಕು. ಹಾಗಾದಲ್ಲಿ ಮಾತ್ರ ಹಾಲಿ ಇರುವ ಸಿಬ್ಬಂದಿಗೆ ತೀವ್ರ ತರವಾದ ಕೆಲಸದ ಒತ್ತಡದಿಂದ ಮುಕ್ತಿ ಸಿಗಬಹುದು. ದೇಶದಲ್ಲಿ ಸುಮಾರು 7.5 ಲಕ್ಷ ಪಿಂಚಣಿದಾರರು ತೊಂದರೆ ಅನುಭವಿಸುತ್ತಿದ್ದಾರೆ. ಪಿಂಚಣಿ ಸೌಲಭ್ಯದ ಪುನರ್ ಪರಿಶೀಲನೆಯಾಗಿಲ್ಲ. ಸರಕಾರವು ಐಬಿಎಗೆ 11ನೆ ವೇತನ ಪರಿಷ್ಕರಣೆ ಪೂರ್ಣಗೊಳಿಸಲು ಪತ್ರ ಬರೆದಿದ್ದು, ಎರಡು ಸಲ ಈ ವಿಷಯವನ್ನು ನೆನಪಿಸಿದೆ. ಆದರೂ ಐಬಿಎ ನಿರ್ಲಕ್ಷ ಧೋರಣೆ ತಳೆದಿರುವುದು ಆತಂಕದ ಸಂಗತಿಯಾಗಿದೆ. ಅನುಕಂಪ ಆಧಾರಿತ ನೌಕರಿ ಕೊಡುವುದರಲ್ಲೂ ಬ್ಯಾಂಕುಗಳು ನಿರ್ಲಕ್ಷ ಧೋರಣೆ ತಾಳುತ್ತಿವೆ. ಇನ್ನೂ ಅನೇಕ ವಿಷಯಗಳ ಶೀಘ್ರ ಇತ್ಯರ್ಥಕ್ಕೆ ಒತ್ತಾಯಿಸಿ ಫೆ.28ರಂದು ಮುಷ್ಕರ ಹೂಡುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಏಕನಾಥ ಬಾಳಿಗಾ, ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ, ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಮಣಿಮಾರನ್, ರವಿ ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News