×
Ad

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು

Update: 2017-02-08 18:36 IST

ಮಂಗಳೂರು, ಫೆ.8: ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುವುದು ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ತಿಳಿಸಿದರು.

ಬುಧವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳವನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಇದು ನಗರ ಪ್ರದೇಶವಾಗಿದ್ದು, ರೈತರು ಕಡಿಮೆಯಿದ್ದಾರೆ. ರೈತರು ಅಧಿಕ ಸಂಖ್ಯೆಯಲ್ಲಿರುವ ಸುಳ್ಯ, ಪುತ್ತೂರು, ಬೆಳ್ತಂಗಡಿಯನ್ನು ಕೂಡಾ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದರು.

ರಾಜ್ಯದಲ್ಲಿ ಬರದ ಛಾಯೆ ಹಾಗೂ ನೋಟು ಅಮಾನತಿನ ಸಮಸ್ಯೆಯಿದೆ. ಹಾಗಾಗಿ ಯಾವುದೇ ಬ್ಯಾಂಕ್‌ಗಳು ರೈತರಿಂದ ಬಲವಂತವಾಗಿ ಸಾಲ ವಸೂಲಾತಿ ಮಾಡಬಾರದು. ಒಂದು ವೇಳೆ ಈ ರೀತಿ ಮಾಡಿದಲ್ಲಿ ಬ್ಯಾಂಕ್ ಮೇನೆಜರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರು ನೀಡಲಾಗುವುದು ಎಂದು ಎಚ್ಚರಿಸಿದ ಅವರು, ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವ ಬಗ್ಗೆ ಗೋರಕ್ ಸಿಂಗ್ ವರದಿಯನ್ನು ಜಾರಿಗೊಳಿಸಲು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಅದರ ತೀರ್ಪು ಫೆ.20ರಂದು ಹೊರಬರಲಿದೆ. ತೀರ್ಪು ಘೋಷಣೆಯಾಗುವವರೆಗೂ ಯಾವುದೇ ಬ್ಯಾಂಕ್ ಬಾಕಿ ವಸೂಲಿ ಮಾಡಬಾರು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡಿದಲ್ಲಿ ರಾಜ್ಯ ಸರಕಾರ ಸಹಕಾರಿ ಬ್ಯಾಂಕ್‌ಗಳಿಂದ ಶೇ. 50ರಷ್ಟು ರೈತರ ಸಾಲ ಮನ್ನಾ ಮಾಡುತ್ತದೆ ಎಂದು ತಿಳಿಸಿದ್ದರೂ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ರೈತ ಪರ ಬಜೆಟ್ ಮಂಡಿಸಲಾಗಿದೆ ಎಂದು ಹೇಳುತ್ತಿದ್ದು, ರೈತರ ಸಾಲ ಮನ್ನಾ ಮಾತ್ರ ಮಾಡುತ್ತಿಲ್ಲ. ಎನ್‌ಪಿಎ ಖಾತೆಯಲ್ಲಿ ರೈತರು 12 ತಿಂಗಳ ಪೈಕಿ 3 ತಿಂಗಳು ಸಾಲ ಬಾಕಿ ಮಾಡಿದಾಗ 12 ತಿಂಗಳ ಸಾಲವನ್ನು ಒಮ್ಮೆಲೆ ಕಟ್ಟಲು ಬ್ಯಾಂಕ್‌ಗಳು ನೋಟಿಸ್ ಕಳುಹಿಸಿವೆ. 3 ತಿಂಗಳ ಸಾಲ ಕಟ್ಟಲಾಗದ ರೈತರು 12 ತಿಂಗಳ ಸಾಲ ಒಮ್ಮೆಲೆ ಕಟ್ಟಲು ಹೇಗೆ ಸಾಧ್ಯ? ಇದು ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂದು ಸಚಿನ್ ಮಿಗಾ ಒತ್ತಾಯಿಸಿದರು.

ಪರಿಸರ ನಾಶದ ಹಿನ್ನೆಲೆಯಲ್ಲಿ ಉದ್ಯಮಿಗಳಿಗೆ ಯುಪಿಎ ಸರಕಾರ 200 ಕೋ.ರೂ. ದಂಡ ಹೇರಿತ್ತು. ಅದನ್ನು ಪ್ರಧಾನಿ ಮೋದಿ ಹಿಂಪಡೆದಿದ್ದಾರೆ. ಆರ್‌ಬಿಐ ಗವರ್ನರ್ ರಘುರಾಮ್‌ರ ಬದಲಿಗೆ ಕಾರ್ಯತಂತ್ರ ರೂಪಿಸಿ ಊರ್ಜಿತ್ ಪಟೇಲ್‌ರನ್ನು ನೇಮಿಸಿ ಅವ್ಯವಹಾರ ನಡೆಸಲು ಅವರನ್ನು ಕಪಿಮುಷ್ಠಿಯಲ್ಲಿರಿಸಿದೆ. ಪ್ರಧಾನ ಮಂತ್ರಿ ಸಲ್ ಭಿಮಾ ಯೋಜನೆ ಕೈಗೊಂಡು 15,000 ಕೋ.ರೂ. ಇದಕ್ಕೆ ಇರಿಸಲಾಗಿದ್ದು, ಇದರ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯ ನಡೆಯಿಂದ ರೈತರಿಗೆ, ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ತೊಂದರೆಗಳಾಗಿವೆ. ವಿದೇಶದಲ್ಲಿರುವ ಕಪ್ಪು ಹಣವನ್ನು ಸಂಪೂರ್ಣವಾಗಿ ತಂದು ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದನ್ನು ಜನತೆ ನಂಬಿದ್ದರು. ಲೋಕಸಭೆ ಚುನಾವಣೆಯ ವೇಳೆ ಅದಾನಿ, ಅಂಬಾನಿ ಉದ್ಯಮಿಗಳಿಂದ ಹಣ ಪಡೆದು ಹೆಚ್ಚಿನ ಪ್ರಚಾರ ನೀಡಿದರು. ಈಗ ಉದ್ಯಮಿಗಳ ಹಣ ಹಿಂತಿರುಗಿಸುವಲ್ಲಿ ಇಕ್ಕಟ್ಟಿಗೆ ಸಿಲುಕಿ ಹುನ್ನಾರ ನಡೆಸಿದ್ದಾರೆ. ರಾಷ್ಟ್ರದ ಗಮನವನ್ನು ಬೇರೆಡೆ ಸೆಳೆದು ನಮ್ಮಲ್ಲಿಯೇ ಕಪ್ಪು ಹಣ ಇರುವುದಾಗಿ ತೋರಿಸಿ ಉದ್ಯಮಿಗಳ 1.14 ಲಕ್ಷ ಕೋ.ರೂ. ವನ್ನು ಮನ್ನಾ ಅಥವಾ ಬ್ಲ್ಯಾಕ್‌ಲಿಸ್ಟ್‌ಗೆ ಹಾಕಿದ್ದಾರೆ. ಜಿಯೋ ಸಿಮ್ ಮೂಲಕ ಯುವಕರು 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ಅಂತರ್ಜಾಲದಲ್ಲೇ ತೊಡಗಿಕೊಳ್ಳುವಂತೆ ಮಾಡಿದ್ದಾರೆ. 1.14 ಲಕ್ಷ ಕೋ.ರೂ. ಮನ್ನಾ ಅಥವಾ ಬ್ಲ್ಯಾಕ್‌ಲಿಸ್ಟ್ ಹಾಕಿರುವ ಬಗ್ಗೆ ದೇಶದ ಜನರಿಗೆ ತಿಳಿದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಪ್ರಧಾನಿ ಹಾಗೂ ಅಮಿತ್ ಶಾ ಪಕ್ಷದ ಮುಖಂಡರ ಕಪ್ಪು ಹಣವನ್ನು ವ್ಯವಸ್ಥಿತವಾಗಿ ರೂಪಾಂತರಗೊಳಿಸಿದ್ದಾರೆ ಎಂದು ಆರೋಪಿಸಿದರು.

 ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಮಾನಾಥ ಶೆಟ್ಟಿ, ನವೀನ್ ಕುಮಾರ್ ರೈ, ಭರತೇಶ್ ಅಮಿನ್, ನೀರಜ್‌ಪಾಲ್, ನಿತ್ಯಾನಂದ ಶೆಟ್ಟಿ, ಸಂತೋಷ್ ಶೆಟ್ಟಿ, ಅಶೋಕ್ ಚೂಂತಾರು, ಆನಂದ ರಾವ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News