ಬಯೋಮೆಟ್ರಿಕ್ ಕಾರ್ಡ್ ಮಾಡಿಸಲು ಕೊನೆಯ ಅವಕಾಶ
ಮಂಗಳೂರು, ಫೆ.8: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿದ್ದು, ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಮತ್ತು ಮೀನುಗಾರಿಕೆ ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಫೆ.8ರಿಂದ 15ರ ವರೆಗೆ ಪೂರ್ವಾಹ್ನ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಆಯೋಜಿಸಲಾಗಿದೆ.
ಇದು ಕೊನೆಯ ಅವಕಾಶವಾಗಿರುವುದರಿಂದ ಮತ್ತು ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಕಡ್ಡಾಯವಾಗಿರುವುದರಿಂದ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಮೀನುಗಾರರ ಸಂಘ ಸಂಸ್ಥೆಗಳು ತಮ್ಮ ಸದಸ್ಯರಲ್ಲಿ ವ್ಯಾಪಕ ಪ್ರಚಾರ ನೀಡಿ ಬಯೋಮೆಟ್ರಿಕ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ತಿಳಿ ಹೇಳಲು ತಿಳಿಸಲಾಗಿದೆ. ಬಯೋಮೆಟ್ರಿಕ್ ಕ್ಯಾಂಪ್‌ನ್ನು ಮಂಗಳೂರು ಮೀನುಗಾರಿಕೆ ಬಂದರಿನ ಮಾಹಿತಿ ಕೇಂದ್ರ, ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1) ಮೀನುಗಾರಿಕೆ ಬಂದರು ಯೋಜನೆ ಕಚೇರಿ ಇಲ್ಲಿ ನಿಗದಿಪಡಿಸಲಾಗಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.