×
Ad

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮರುಟೆಂಡರ್ ವಿರುದ್ಧ ತನಿಖೆ ನಡೆಸಲು ದಸಂಸ ಡಿಸಿಗೆ ಮನವಿ

Update: 2017-02-08 19:34 IST

ಮಂಗಳೂರು, ಫೆ.8: ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಲಭ್ಯಗಳಾದ ಚಾಪೆ, ಹೊದಿಕೆ, ಸಿಸಿ ಕ್ಯಾಮೆರಾ ಅಳವಡಿಕೆ, ಕಂಪ್ಯೂಟರ್ ಖರೀದಿಗಾಗಿ ದ.ಕ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಕಟಪೂರ್ವ ಜಿಲ್ಲಾ ಅಧಿಕಾರಿ ಜಯಣ್ಣ ಕರೆದಿದ್ದ ಟೆಂಡರನ್ನು ರದ್ದುಪಡಿಸಿರುವ ಇಲಾಖೆಯ ಹಾಲಿ ಜಿಲ್ಲಾ ಅಧಿಕಾರಿ ನಾಗರಾಜಪ್ಪ ಮರುಟೆಂಡರ್ ಖರೀದಿಸಿರುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ನಿಯೋಗ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಈ ಟೆಂಡರನ್ನು ತಮ್ಮ ಆಪ್ತ ಸಂಬಂಧಿಕರಿಗೆ ನೀಡುವ ಉದ್ದೇಶದಿಂದ ಮರು ಟೆಂಡರ್ ಕರೆಯಲಾಗಿದೆ. ಇದರಲ್ಲಿ ಬೆಂಗಳೂರು ಮೂಲದ ಶಂಕರ್ ಎಂಟರ್‌ಪ್ರೈಸಸ್ ಸಂಸ್ಥೆ ಭಾಗವಹಿಸಿದೆ. ಈ ಸಂಸ್ಥೆಯು ಮೂರು ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿಗೊಂಡದ್ದಾಗಿದೆ. ಕಾನೂನು ಪ್ರಕಾರ ಈ ಸಂಸ್ಥೆಗೆ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಲಾಗಿದೆ. ಈ ಅಧಿಕಾರಿಯು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಎಸಗಿದ ಆರೋಪವಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ ಇದಕ್ಕೆ ಕುಮ್ಮಕ್ಕು ನೀಡಿದ ಇಲಾಖೆಯ ಜಿಲ್ಲಾ ಅಧಿಕಾರಿ ನಾಗರಾಜಪ್ಪ ವಿರುದ್ಧ ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ದೂರಿನ ಪ್ರತಿಯನ್ನು ದ.ಕ.ಜಿಪಂ ಸಿಇಒ, ಎಸಿಬಿ ಅಧೀಕ್ಷಕರಿಗೂ ಸಲ್ಲಿಸಲಾಗಿದೆ.

ದಸಂಸ ಮಂಗಳೂರು ತಾಲೂಕು ಸಂಚಾಲಕ ಜಗದೀಶ್ ಪಾಂಡೇಶ್ವರ, ತಾಲೂಕು ಸಂಘಟನಾ ಸಂಚಾಲಕ ಕೆ. ಚಂದ್ರ ಕಡಂದಲೆ, ಕೋಲಾರ ಜಿಲ್ಲಾ ಮಾಜಿ ಸಂಚಾಲಕ ಕೆ.ಸಿ.ರಾಜಣ್ಣ ನಿಯೋಗದಲ್ಲಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News