ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನಕ್ಕೆ ಹಣ ಮೀಸಲಿಡಲು ಒತ್ತಾಯ
ಮಂಗಳೂರು, ಫೆ. 8: ದ.ಕ. ಜಿಲ್ಲೆಯ ಮಂಗಳೂರು ನಗರ, ಸುರತ್ಕಲ್ ಮತ್ತಿತರ ಕಡೆಗಳಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತಿರುವುದರಿಂದ ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನಕ್ಕೆ ಮುಂದಿನ ಬಜೆಟ್‌ನಲ್ಲಿ 800 ಕೋಟಿ ರೂ. ಮೀಸಲಿಡಬೇಕೆಂದು ಶಾಸಕ ಮೊದಿನ್ ಬಾವ ಒತ್ತಾಯಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮುಖ್ಯಮಂತ್ರಿಯವರಲ್ಲಿ ಜಿಲ್ಲೆಗೆ ಸಂಬಂಧಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಸದ್ಯ ಈಗಿರುವ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೊಳಿಸಬೇಕೆಂಬ ಬೇಡಿಕೆ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ನ ರನ್‌ವೇ ವಿಸ್ತರಣೆಗಾಗಿ 200 ಎಕರೆ ಜಮೀನು ಅಗತ್ಯವಾಗಿದ್ದು, ಈ ಜಮೀನಿನ ಸ್ವಾಧೀನಕ್ಕೆ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸಿರುವುದಾಗಿ ಶಾಸಕ ಮೊದಿನ್ ಬಾವ ತಿಳಿಸಿದ್ದಾರೆ.
ಮಂಗಳೂರು ನಗರದ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು, ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಯವರು 100 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು ಒತ್ತಾಯ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ನಿರ್ದಿಷ್ಟ ವ್ಯಾಪ್ತಿಗೊಳಪಟ್ಟು 94 ಸಿಸಿಯಲ್ಲಿ ನಿವೇಶನ ರಹಿತರಿಗೆ ನೀಡಲಾಗುವ ಒಂದೂವರೆ ಸೆಂಟ್ಸ್ ಭೂಮಿಯ ಹಕ್ಕನ್ನು 3 ಸೆಂಟ್ಸ್‌ಗೆ ಹೆಚ್ಚಿಬೇಕು. ಅಲ್ಲದೆ, ಈಗಾಗಲೇ ಗ್ರಾಮಾಂತರ ಪ್ರದೇಶದಲ್ಲಿ ಬಫರ್ ರೆನ್ ಎಂದು ಗುರುತಿಸಿ 5 ಸೆಂಟ್ಸ್ ನಿವೇಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದ್ದು, ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಸುರತ್ಕಲ್ ಜಂಕ್ಷನ್ ಬಳಿ ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಜಿ ಸಂಸದ ಶ್ರೀನಿವಾಸ ಮಲ್ಯ ಭವನಕ್ಕೆ ಕಳೆದ ಬಾರಿ ಮುಖ್ಯಮಂತ್ರಿವರು 1 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಇದರ ಕಾಮಗಾರಿ ನಡೆಯುತ್ತಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 1 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ತಾನು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದು, ಇದಕ್ಕೆ ಶೀಘ್ರವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಯವರು 1 ಕೋಟಿ ರೂ.ವನ್ನು ಮಂಜೂರುಗೊಳಿಸಿದ್ದಾರೆ ಎಂದು ಬಾವ ತಿಳಿಸಿದ್ದಾರೆ.