ಬೆಳಪು ಗ್ರಾಮಕ್ಕೆ ಛತ್ತೀಸ್‌ಗಢದ ಜನಪ್ರತಿನಿಧಿಗಳ ಅಧ್ಯಯನ ಭೇಟಿ

Update: 2017-02-08 15:17 GMT

ಪಡುಬಿದ್ರಿ, ಫೆ.8: ರಾಷ್ಟ್ರದಲ್ಲೇ ಗಮನಸೆಳೆದ ಉಡುಪಿ ಜಿಲ್ಲೆಯ ಬೆಳಪು ಗ್ರಾಮಕ್ಕೆ ಛತ್ತೀಸ್‌ಗಢ ರಾಜ್ಯದ ಜಿಲ್ಲಾ ಮಟ್ಟದ ಚುನಾಯಿತ ಪ್ರತಿನಿಧಿಗಳು ಮತ್ತು ಎಸ್.ಐ.ಆರ್.ಡಿ. ಅಧಿಕಾರಿಗಳ ಸಹಿತ ಒಟ್ಟು 31 ಜನರ ತಂಡವು ಅಧ್ಯಯನ ಪ್ರವಾಸದಡಿ ಬುಧವಾರದಂದು ಭೇಟಿ ನೀಡಿತು.

ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖಾ ನಿರ್ದೇಶಕ ಪ್ರಾಣೇಶ್ ರಾವ್ ಡಿ. ಮಾತನಾಡಿ, ಬೆಳಪು ಗ್ರಾಮದಲ್ಲಿ ನಡೆದಿರುವ ಅಭಿವೃದ್ಧಿಯ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆಗೆ ಉತ್ತಮ ಹೆಸರು ತಂದಿದೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿಗೊಳಿಸಿದೆ. ಬಾಪೂಜಿ ಸೇವಾ ಕೇಂದ್ರ ಸಹಿತ ಹತ್ತು ಹಲವಾರು ಯೋಜನೆಗಳನ್ನು ಈ ಗ್ರಾಮದಲ್ಲಿ ಅನುಷ್ಠಾನಿಸುವ ಮೂಲಕ ಮಾದರಿಯಾಗಿದೆ ಎಂದರು.

ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ ದೇವಿಪ್ರಸಾದ್ ಶೆಟ್ಟಿ, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದಿಂದಾಗಿ ಬೆಳಪು ಗ್ರಾಮವು ಉತ್ಕೃಷ್ಟ ಅಭಿವೃದ್ಧಿ ಪಡೆದುಕೊಳ್ಳುವಂತಾಗಿದೆ. ವಿವಿಧ ರಾಜ್ಯಗಳು, ಜಿಲ್ಲೆಗಳ ನಿಯೋಗ ಭೇಟಿ ನೀಡುತ್ತಿರುವುದರಿಂದ ಇದೇ ರೀತಿಯ ಸಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಪ್ರೋತ್ಸಾಹ ದೊರಕಿದಂತಾಗಿದೆ ಎಂದರು.
ಈ ತಂಡವು ಬೆಳಪು ಗ್ರಾಮ ಪಂಚಾಯಿತಿ ಆಡಳಿತ ಕಚೇರಿ, ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ಹಿಂದೂ ರುದ್ರಭೂಮಿ ಮೊದಲಾದೆಡೆಗಳಿಗೆ ಭೇಟಿ ನೀಡಿ ನಿರ್ವಹಣೆ, ಕಾರ್ಯವೈಖರಿ ಮತ್ತು ಶುಚಿತ್ವದ ಬಗ್ಗೆ ಅಧ್ಯಯನ ತಂಡವು ಅಧ್ಯಯನ ನಡೆಸಿತು.ಅಧ್ಯಕ್ಷರು, ಜನಪ್ರತಿನಿಧಿಗಳ ಗ್ರಾಮದ ಜನರ ಪರ ಕಾಳಜಿ, ಅಭಿವೃದ್ಧಿಯ ಕಾರ್ಯವೈಕರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಛತ್ತೀಸ್‌ಗಢ ದಂತೇವಾಡ ಕ್ಷೇತ್ರದ ಮಾಜಿ ಶಾಸಕ ಕ್ಷೇತ್ರ ಮಟಾಮಿ, ವಿವಿಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳಾದ ಕಮಲನಾಗ್ ದಂತೇವಾಡ, ಶಾರದಾ ವರ್ಮ ರಾಯ್‌ಪುರ, ಕಲಾವಳ್ಳಿ ಕೋಯ್ಕಿ, ಎಸ್.ಐ.ಆರ್.ಡಿ. ತರಬೇತಿ ಸಂಯೋಜಕ ಅಬೂಬಕ್ಕರ್ ಟಿ.ಎಂ., ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಹೆಚ್. ಆರ್., ವಿವಿಧ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News