ಫೆ.12ರಂದು ಹಳೆಯಂಗಡಿ ನಾರಾಯಣ ಸನಿಲ್ ಕಾಲೇಜಿನ ‘ಸುವರ್ಣ ಸಂಭ್ರಮ’
ಮುಲ್ಕಿ, ಫೆ.8: ಶಿಕ್ಷಣಾ ಕ್ಷೇತ್ರದಲ್ಲಿ 50 ಸಂವತ್ಸರಗಳ ಸಾರ್ಥಕ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನದಾಹ ತಣಿಸಿ ಅವರ ಬಾಳನ್ನು ಬೆಳಗಿಸಿದ ಕರಾವಳಿಯ ಶಿಕ್ಷಣ ಸಂಸ್ಥೆ ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವವು ಫೆ.12 ರಂದು ಜರಗಲಿದೆ.
ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅಂದು ಬೆಳಗ್ಗೆ 9.00ಗಂಟೆಗೆ ಮುಲ್ಕಿ ಅರಮನೆಯ ಅರಸರಾಗಿರುವ ಎಂ. ದುಗ್ಗಣ್ಣ ಸಾವಂತರು ರ್ಧವಜಾರೋಹಣ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ. ಸಂಜೆ 4.00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ನೆರವೇರಿಸಲಿದ್ದಾರೆ.
ಸುವರ್ಣಾ ಮಹೋತ್ಸವದ ಸ್ಮರಣಾರ್ಥ ನಿರ್ಮಿಸಲಾಗಿರುವ ನೂತನ ನಾರಾಯಣ ಸನಿಲ್ ರಂಗ ಮಂದಿರವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ‘ಪೊನ್ನ ಕದಿರು’ವನ್ನು ನಿಟ್ಟೆ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಎಂ. ಶಾಂತಾರಾಮ ಶೆಟ್ಟಿಯವರು ಬಿಡುಗಡೆಗೊಳಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಉದ್ಯಮಿ ಅಶೋಕ್ ಶೆಟ್ಟಿ ಭಾಗವಹಿಸಲಿದ್ದು, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜ, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಎಸ್.ಎಸ್. ಸತೀಶ್ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸುವರ್ಣಾ ಮಹೋತ್ಸವ ಸಮಿತಿ ಅಧ್ಯಕ್ಷ ಪಂಜದಗುತ್ತು ಶಾಂತಾರಾಮ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.