ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಲು ಪಾಪ್ಯುಲರ್ ಫ್ರಂಟ್ ಮನವಿ
ಉತ್ತರಪ್ರದೇಶ, ಫೆ. 8: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ಸೋಲಿಸುವ ಸಲುವಾಗಿ ತಮ್ಮ ಮತದಾನದ ಹಕ್ಕನ್ನು ಜಾತ್ಯತೀತ ಸರಕಾರದ ಅಸ್ತಿತ್ವಕ್ಕಾಗಿ ಚಲಾಯಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾರ್ತ್ ಝೋನ್ ಕಾರ್ಯದರ್ಶಿ ಅನೀಸ್ ಅನ್ಸಾರಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ರಾಜ್ಯದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಅದು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಅಪಾಯಕಾರಿ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿದ ನೋಟು ಅಮಾನ್ಯ ಸಮಸ್ಯೆ ಮುಂದರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಸರಕಾರದ ದ್ವೇಷ ರಾಜಕಾರಣವು, ದುರ್ಬಲ ವರ್ಗಗಳು ಸೇರಿದಂತೆ ದಲಿತ ಮತ್ತು ಅಲ್ಪಸಂಖ್ಯಾತರಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಮೋದಿ ಸರಕಾರವು ಇಡೀ ಸಮಾಜವನ್ನು ಹಿಂಸೆ ಮತ್ತು ವಿಭಜನೆಯ ವಾತಾವರಣದೊಂದಿಗೆ ದೇಶವನ್ನು ಆಳುತ್ತಿದೆ. ಇದೀಗ ಮುಂಬರುವ ಉ.ಪ್ರ. ಚುನಾವಣೆಯು ಆಡಳಿತಾರೂಢ ಬಿಜೆಪಿಗೆ ಮತ್ತು ಇಡೀ ದೇಶಕ್ಕೇ ನಿರ್ಣಾಯಕವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸೀಟುಗಳನ್ನು ಪಡೆದಲ್ಲಿ ಮಾತ್ರ ಮೋದಿ ಸರಕಾರ ರಾಜ್ಯ ಸಭೆಯಲ್ಲಿ ಬಹುಮತ ಹೊಂದುತ್ತದೆ ಎಂದವರು ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸೀಟುಗಳನ್ನು ಪಡೆದಿರುವುದು ಮತಗಳು ವಿವಿಧ ಅಭ್ಯರ್ಥಿಗಳ ನಡುವೆ ಹಂಚಿಕೆಯಾಗಿರುವುದರಿಂದಲೇ ಹೊರತು ಬಹುಮತದಿಂದ ಅಲ್ಲ. ಇಂತಹ ಸಂದರ್ಭದಲ್ಲಿ ಒಂದೇ ಕ್ಷೇತ್ರದಲ್ಲಿ ಹೆಚ್ಚಿನ ಬಿಜೆಪಿಯೇತರ ಅಭ್ಯರ್ಥಿಗಳು ಸ್ಪರ್ಧಿಸುವುದು ಕ್ಲಿಷ್ಟಕರ ನಿರ್ಧಾರವಾಗಿದೆ. ಆದ್ದರಿಂದ ಇದೀಗ ಕಾಂಗ್ರೆಸ್-ಎಸ್ಪಿ ಪಕ್ಷಗಳು ಒಕ್ಕೂಟವಾಗಿ ಚುನಾವಣೆ ಎದುರಿಸುತ್ತಿರುವುದು ಜಾತ್ಯತೀತ, ಅಲ್ಪಸಂಖ್ಯಾತರ ಮತಗಳ ಒಡಕನ್ನು ತಡೆಗಟ್ಟುವುದಕ್ಕೆ ಇರುವ ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದ ಅನ್ಸಾರಿ, ಬಿಜೆಪಿ ಅಭ್ಯರ್ಥಿಗಳ ಸೋಲನ್ನು ಖಚಿತಪಡಿಸುವ ಸಲುವಾಗಿ ಪ್ರತಿ ಕ್ಷೇತ್ರದ ಮತದಾರರು, ಜಾತ್ಯತೀತ ಮತ್ತು ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವುದನ್ನು ತಡೆಗಟ್ಟಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.